ಚೊಚ್ಚಲ ಕಾದಂಬರಿ 'ಲಾಲ್ ಸಲಾಂ' ಮೂಲಕ ಲೇಖಕಿಯಾದ ಬಿಜೆಪಿ ನಾಯಕಿ ಸ್ಮೃತಿ ಇರಾನಿ

ಹೊಸದಿಲ್ಲಿ: ಕೇಂದ್ರ ಸಚಿವೆ ಸ್ಮೃತಿ ಝುಬಿನ್ ಇರಾನಿ ಅವರು ತಮ್ಮ ಚೊಚ್ಚಲ ಕಾದಂಬರಿ "ಲಾಲ್ ಸಲಾಂ " ಮೂಲಕ ಲೇಖಕಿಯಾಗಿದ್ದಾರೆ ಎಂದು ವೆಸ್ಟ್ ಲ್ಯಾಂಡ್ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ.
ಈ ಕಾದಂಬರಿಯು ಎಪ್ರಿಲ್ 2010 ರಲ್ಲಿ ಛತ್ತೀಸ್‌ಗಢದ ದಾಂತೇವಾಡದಲ್ಲಿ 76 ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್)ಯೋಧರ ದುರಂತ ಹತ್ಯೆಯಿಂದ ಸ್ಫೂರ್ತಿ ಪಡೆದಿದೆ. ಇದು ನವೆಂಬರ್ 29 ರಂದು ಬಿಡುಗಡೆಯಾಗಲಿದೆ.
"ಕಥೆಯು ಕೆಲವು ವರ್ಷಗಳಿಂದ ನನ್ನ ಮನಸ್ಸಿನ ಹಿಂಭಾಗದಲ್ಲಿ ಹುದುಗಿತ್ತು. ಅದನ್ನು ಬರಹಕ್ಕೆ ಇಳಿಸುವುದನ್ನು ತಡೆಯಲಾಗಲಿಲ್ಲ.ನಿರೂಪಣೆಯಲ್ಲಿ ತರಲು ಪ್ರಯತ್ನಿಸಿರುವ ವೇಗ ಹಾಗೂ ಒಳನೋಟಗಳನ್ನು ಓದುಗರು ಆನಂದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ'' ಎಂದು ಬಿಜೆಪಿಯ ಹಿರಿಯ ನಾಯಕಿ ಮತ್ತು ಮಾಜಿ ನಟಿ ತಮ್ಮ ಮುಂಬರುವ ಪುಸ್ತಕದ ಬಗ್ಗೆ ಹೇಳಿದ್ದಾರೆ.
ವಿಕ್ರಮ್ ಪ್ರತಾಪ್ ಸಿಂಗ್ ಹೆಸರಿನ ಯುವ ಅಧಿಕಾರಿಯು ರಾಜಕೀಯ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿರುವ ವ್ಯವಸ್ಥೆಯ ವಿರುದ್ಧ ಎದುರಿಸಿರುವ ಸವಾಲುಗಳ ಕಥೆಯನ್ನು 'ಲಾಲ್ ಸಲಾಂ' ಒಳಗೊಂಡಿದೆ.