"ಪ್ರಧಾನಿ ಮೋದಿ ಅವರು ಪ್ರವಾದಿಯ ಸಂದೇಶಗಳನ್ನು ಜಾರಿಗೊಳಿಸುತ್ತಿದ್ದಾರೆ" ಎಂದ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ

ಹೊಸದಿಲ್ಲಿ: "ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾದಿ ಮುಹಮ್ಮದ್ ಅವರ ಸಂದೇಶಗಳನ್ನು ಜಾರಿಗೊಳಿಸುತ್ತಿದ್ದಾರೆ ಹಾಗೂ ಇಸ್ಲಾಂ ಬೆಂಬಲಿಸುವ ಕೆಲಸಗಳನ್ನು ಮಾಡುತ್ತಿದ್ದಾರೆ," ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮುಖ್ಯಸ್ಥ ಜಮಾಲ್ ಸಿದ್ದೀಖಿ ಹೇಳಿದ್ದಾರೆ.
ಸರಕಾರದ ಯೋಜನೆಗಳಾದ ಸ್ವಚ್ಛ ಭಾರತ್ ಅಭಿಯಾನ್, ಬೇಟಿ ಬಚಾವೋ ಬೇಟಿ ಪಡಾವೋ ಮತ್ತು ಸ್ಟಾರ್ಟ್‍ಅಪ್ ಇಂಡಿಯಾ ಎಲ್ಲವೂ ಇಸ್ಲಾಮಿಕ್ ತತ್ವಗಳಂತೆಯೇ ಇವೆ ಎಂದು ಸಿದ್ದೀಖಿ ಸುದ್ದಿ ಮಾಧ್ಯಮವೊಂದರ ಜತೆ ಮಾತನಾಡುತ್ತಾ ಹೇಳಿದ್ದಾರೆ.
"ಸಫಾಯಿ (ಸ್ವಚ್ಛತೆ) ಇಸ್ಲಾಂನ ಅವಿಭಾಜ್ಯ ಅಂಗ. ಪ್ರವಾದಿ ಅವರು ಒಮ್ಮೆ ಸ್ವಚ್ಛತೆಯನ್ನು ʼಧರ್ಮದ ಅರ್ಧ ಭಾಗʼ ಎಂದು ಹೇಳಿದ್ದಾರೆ. ಆದರೆ ಇಷ್ಟು ವರ್ಷದ ತನಕ ಸ್ವಚ್ಛತೆಗೆ ಸಂಬಂಧಿಸಿದ ಯಾವುದೇ ರಾಷ್ಟ್ರೀಯ ಅಭಿಯಾನವಿರಲಿಲ್ಲ. ಪ್ರಧಾನಿ ಮೋದಿ ಅದನ್ನು ಪ್ರಾರಂಭಿಸಿದರು ಹಾಗೂ ಅದು ಉಂಟು ಮಾಡಿದ ಬದಲಾವಣೆಯನ್ನು ನಾವು ನೋಡುತ್ತಿದ್ದೇವೆ. ಇಸ್ಲಾಂ ಬೆಂಬಲಿಸುವ ಎಲ್ಲಾ ವಿಷಯಗಳನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ" ಎಂದು ಅವರು ಹೇಳಿದರು.
ಪ್ರವಾದಿ ಅವರ ಕಾಲದಲ್ಲಿ ಪುತ್ರಿಯರನ್ನು ಜೀವಂತ ಹೂಳಲಾಗುತ್ತಿತ್ತು ಎಂದು ಹೇಳಿದ ಅವರು "ಜನರು ಗರ್ಭದಲ್ಲಿರುವಾಗಲೇ ಹೆಣ್ಣು ಶಿಶುಗಳನ್ನು ಕೊಲ್ಲುತ್ತಿದ್ದರು. ಆಗ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಸಂದೇಶವನ್ನು ಪ್ರವಾದಿ ಸಾರಿದ್ದರು. ಕುರಾನ್ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಮಾತನಾಡಿದೆ, ನಮ್ಮ ಪ್ರಧಾನಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಆರಂಭಿಸಿದರು ಇದು ಹೆಣ್ಣು ಮಗುವಿನ ರಕ್ಷಣೆ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡುತ್ತದೆ" ಎಂದು ಅವರು ಹೇಳಿದರು.
"ಕುರ್ ಆನ್‍ನ ಮೊದಲ ಅಧ್ಯಾಯ ಇಖ್ರಾ (ಓದು) ಎಂದಾಗಿದೆ. ಇಸ್ಲಾಂ ಶಿಕ್ಷಣಕ್ಕೆ ಒತ್ತು ನೀಡುತ್ತದೆ. ಆದರೆ ಮುಸ್ಲಿಮರು ಧಾರ್ಮಿಕ ಶಿಕ್ಷಣವನ್ನಷ್ಟೇ ಪಡೆಯುತ್ತಿದ್ದರು. ಈಗ ಪ್ರಧಾನಿಯ ನಾಯಕತ್ವದಲ್ಲಿ ಶಿಕ್ಷಣ ಹಾಗೂ ಹೆಣ್ಣು ಮಕ್ಕಳ ಶಿಕ್ಷಣದತ್ತ ಒತ್ತು ನೀಡಲಾಗುತ್ತಿದೆ. ಮದ್ರಸ ಶಿಕ್ಷಣವನ್ನೇ ನೋಡಿ, ಅದು ಕೂಡ ಆದು ಆಧುನೀಕರಣಗೊಳ್ಳುತ್ತಿದೆ" ಎಂದು ಅವರು ಹೇಳಿದ್ದಾರೆ.