ಪಿಯುಸಿ ಅರ್ಧವಾರ್ಷಿಕ ಪರೀಕ್ಷೆ ಮುಂದೂಡಿಕೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ನ.18: ಏಕಕಾಲದಲ್ಲಿ ನಡೆಯುವ ದ್ವಿತೀಯ ಪಿಯು ಅರ್ಧವಾರ್ಷಿಕ ಪರೀಕ್ಷೆಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಇದೇ ನ.29ರಿಂದ ನಡಯಬೇಕಿದ್ದ ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆಯನ್ನು ಮುಂದೂಡಲಾಗಿದೆ. ಪಿಯು ಮಂಡಳಿ ಹೊಸ ದಿನಾಂಕ ಪ್ರಕಟಿಸಿದ್ದು, ಡಿ.13 ರಿಂದ ಡಿ.24ರವರೆಗೆ ಮಧ್ಯವಾರ್ಷಿಕ ಪರೀಕ್ಷೆಗಳು ನಡೆಯಲಿವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಬುಧವಾರ ನಡೆದ ಸಭೆಯ ತೀರ್ಮಾನದಂತೆ, ಉತ್ತರ ಪತ್ರಿಕೆಯ ಮೌಲ್ಯಮಾಪನದ ಜವಾಬ್ದಾರಿಯನ್ನು ಕಾಲೇಜು ಪ್ರಾಂಶುಪಾಲರಿಗೆ ನೀಡಿದ್ದು, ಕಾಲೇಜುಗಳಲ್ಲಿ ಪಠ್ಯಕ್ರಮದ ಪೂರೈಕೆಯ ಕುರಿತು ಪ್ರಾಂಶುಪಾಲರಿಂದ ಅಭಿಪ್ರಾಯಗಳನ್ನು ಪಡೆಯಲಾಗುತ್ತಿದೆ.
ಹಾಗೆಯೆ, ಆಯಾ ಕಾಲೇಜಿನ ಪ್ರಾಂಶುಪಾಲರು ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ದೈನಂದಿನ ಹಾಜರಾತಿಯನ್ನು ಕಡ್ಡಾಯವಾಗಿ ಬೆಳಗ್ಗೆ 12 ಗಂಟೆ ಒಳಗಾಗಿ ಎಸ್.ಎಸ್.ಟಿ.ಎಸ್. ಪೋರ್ಟ್ಲ್ನಲ್ಲಿ ನಮೂದಿಸಬೇಕು. ವಿದ್ಯಾರ್ಥಿಗಳಿಗೆ ನಡೆಸುತ್ತಿರುವ ಘಟಕ ಪರೀಕ್ಷೆಗಳು ಹಾಗೂ ಅಸೈನ್ಮೆಂಟ್ಗಳ ಅಂಕಗಳನ್ನು ಎಸ್.ಎಸ್.ಟಿ.ಎಸ್.ನಲ್ಲಿ ನಮೂದಿಸುವಂತೆ ಸೂಚನೆ ನೀಡಲಾಗಿದೆ.
ಇನ್ನು ಅರ್ಧವಾರ್ಷಿಕ ಪರೀಕ್ಷೆಗಳು ಡಿ.13 ರಿಂದ ಏಕಕಾಲಕ್ಕೆ ನಡೆಯಲಿದ್ದು, ಕಾಲೇಜಿನ ಹಂತದಲ್ಲಿ ಮೌಲ್ಯಮಾಪನ ಕಾರ್ಯವನ್ನು ಮಾಡಿ ಡಿ.31ರ ಒಳಗಾಗಿ ಎಸ್.ಎ.ಟಿ.ಎಸ್ ಪೋರ್ಟ್ಲ್ನಲ್ಲಿ ವಿದ್ಯಾರ್ಥಿಗಳ ಅಂಕಗಳನ್ನು ಕಡ್ಡಾಯವಾಗಿ ನಮೂದಿಸಲು ಪ್ರಾಂಶುಪಾಲರಿಗೆ ಸೂಚಿಸಿದೆ.
ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು ಕಡ್ಡಾಯವಾಗಿಇ-ಆಫೀಸ್ನಲ್ಲಿಯೇ ಎಲ್ಲ ಕರ್ತವ್ಯಗಳನ್ನು ನಿರ್ವಹಿಸಲು ತಿಳಿಸಲಾಗಿದೆ. ವಿಜ್ಞಾನ ವಿಭಾಗದ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಭೌತಶಾಸ್ತç, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಕಾಲೇಜಿನ ಅವಧಿಯ ನಂತರ ಹೆಚ್ಚುವರಿಯಾಗಿ ಒಂದು ಗಂಟೆ ಭೋದನೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಶಿಕ್ಷಣ ಮೂಲಗಳು ತಿಳಿಸಿವೆ.