ಜನನ,ಜಾತಿ ಪ್ರಮಾಣ ಪತ್ರಗಳನ್ನು ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ ಸಮೀರ್ ವಾಂಖೆಡೆ
ನವೆಂಬರ್ 22 ರಂದು ತೀರ್ಪು ಪ್ರಕಟಿಸಲಿರುವ ನ್ಯಾಯಮೂರ್ತಿ ಮಾಧವ್ ಜಮಾದಾರ್
ಮುಂಬೈ: ಎನ್‌ಸಿಪಿ ನಾಯಕ ನವಾಬ್ ಮಲಿಕ್ ವಿರುದ್ಧ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ತಂದೆ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ವಾಂಖೆಡೆ ಅವರ ವಕೀಲರು ಗುರುವಾರ ಬಾಂಬೆ ಹೈಕೋರ್ಟ್‌ಗೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು India Today ವರದಿ ಮಾಡಿದೆ.
ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಕೋಟಾದಡಿಯಲ್ಲಿ ಉದ್ಯೋಗ ಪಡೆಯಲು ಹಿಂದೂ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದವನು ಎಂದು ತೋರಿಸಲು ವಾಂಖೆಡೆ ನಕಲಿ ಜಾತಿ ಪ್ರಮಾಣಪತ್ರವನ್ನು ಒದಗಿಸಿದ್ದಾರೆ ಎಂದು ಮಹಾರಾಷ್ಟ್ರ ಸರಕಾರದ ಸಂಪುಟ ದರ್ಜೆಯ ಸಚಿವ ನವಾಬ್ ಮಲಿಕ್ ಆರೋಪಿಸಿದ್ದಾರೆ.
ಗುರುವಾರ ಮಲಿಕ್ ಅವರು ತಮ್ಮ ವಕೀಲರಾದ ಅತುಲ್ ದಾಮ್ಲೆ ಹಾಗೂ ಕುನಾಲ್ ದಾಮ್ಲೆ ಮೂಲಕ ಮೂರು ದಾಖಲೆಗಳನ್ನು ನ್ಯಾಯಮೂರ್ತಿ ಮಾಧವ್ ಜಮಾದಾರ್ ಅವರ ಪೀಠಕ್ಕೆ ಸಲ್ಲಿಸಿದರು. ಇವುಗಳಲ್ಲಿ ಸಮೀರ್ ವಾಂಖೆಡೆ ಅವರ ತಂದೆಯ ಹೆಸರು ಬದಲಾವಣೆಗೆ ಸಂಬಂಧಿಸಿದ ಘೋಷಣೆಯ ಪ್ರತಿಯೊಂದಿಗೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಯಿಂದ ನೀಡಿದ ಸಾರ್ವಜನಿಕ ಆರೋಗ್ಯ ಅಧಿಕಾರಿಯ ಪತ್ರವೂ ಸೇರಿದೆ. ಸೇಂಟ್ ಜೋಸೆಫ್ ಹೈಸ್ಕೂಲ್ ಹಾಗೂ ಸೇಂಟ್ ಪೌಲ್ ಹೈಸ್ಕೂಲ್ ನೀಡಿದ ಸಮೀರ್ ವಾಂಖೆಡೆ ಅವರ ಶಾಲೆ ಬಿಡುವ ಪ್ರಮಾಣಪತ್ರಗಳು ಇವೆ.
ಸಮೀರ್ ವಾಂಖೆಡೆಯನ್ನು ಪ್ರತಿನಿಧಿಸುವ ವಕೀಲರಾದ ಅರ್ಷದ್ ಶೇಖ್ ಮತ್ತು ದಿವಾಕರ್ ರೈ ಅವರು ನ್ಯಾಯಾಲಯಕ್ಕೆ ಎರಡು ದಾಖಲೆಗಳನ್ನು ನೀಡಿದರು. ಬಿಎಂಸಿ ನೀಡಿದ ಡಿಜಿಟೈಸ್ಡ್ ಜನನ ಪ್ರಮಾಣಪತ್ರ ಹಾಗೂ ವಾಂಖೆಡೆ ಅವರ ತಂದೆ ಜ್ಞಾನದೇವ್ ವಾಂಖೆಡೆ ಅವರ ಜಾತಿ ಪ್ರಮಾಣಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಪೀಠವು ಎಲ್ಲಾ ದಾಖಲೆಗಳನ್ನು ದಾಖಲೆಯಲ್ಲಿ ತೆಗೆದುಕೊಂಡಿತು. ನವೆಂಬರ್ 22 ರಂದು ಸಂಜೆ 5.30 ಕ್ಕೆ ತೀರ್ಪನ್ನು ಪ್ರಕಟಿಸಲಾಗುವುದು. ಇನ್ನು ಮುಂದೆ ಯಾವುದೇ ದಾಖಲೆಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ನ್ಯಾಯಮೂರ್ತಿ ಜಮಾದಾರ್ ಅವರು ಸ್ಪಷ್ಟಪಡಿಸಿದರು.