ಉಡುಪಿ; ಬ್ಯಾಂಕ್ ಮೆನೇಜರ್‌ನಿಂದ ಜಾತಿನಿಂದನೆ ಆರೋಪ : ದೂರು
ಉಡುಪಿ, ನ.18: ಎಸ್‌ಬಿಐ ಬ್ಯಾಂಕ್ ಮೆನೇಜರ್, ಮಹಿಳೆಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರಿಯಾರ ಗ್ರಾಮದ ಕೆದ್ಲಹಕ್ಲು ನಿವಾಸಿ ಶೇಖರ ಎಂಬವರ ಪತ್ನಿ ಜ್ಯೋತಿ ಎಸ್.(36) ಎಂಬವರು ಸ್ವ ಉದ್ಯೋಗ ಮಾಡಲು 2020-21ನೇ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಸಿದ್ದು, ಅರ್ಜಿ ಆಯ್ಕೆಗೊಂಡು ಬ್ರಹ್ಮಾವರ ಎಸ್‌ಬಿಐ ಬ್ಯಾಂಕಿನಲ್ಲಿ ಸಾಲ ಸೌಲಭ್ಯ ನೀಡುವ ಬಗ್ಗೆ ಇಲಾಖೆಯ ಒಪ್ಪಿಗೆ ಪತ್ರ ಕೇಳಿದ್ದರು.
ಅದರಂತೆ ಬ್ಯಾಂಕ್ ಒಪ್ಪಿಗೆ ಪತ್ರ ನೀಡಿದ್ದರು. ಇಲಾಖೆಯ ಸಬ್ಸಿಡಿ ಹಣ ಬ್ರಹ್ಮಾವರ ಎಸ್‌ಬಿಐ ಖಾತೆಗೆ ಜಮಾ ಆಗಿದ್ದರೂ, ಆ ಹಣವನ್ನು ನೀಡಲು ಬ್ರಹ್ಮಾವರ ಎಸ್‌ಬಿಐ ಬ್ಯಾಂಕ್ ಮೆನೇಜರ್ ನಿತೀಶ್ ಪೈ ಸತಾಯಿಸಿದ್ದರು ಎನ್ನಲಾಗಿದ್ದು, ನಂತರ ನ.17ರಂದು ಉಡುಪಿ ಎಸ್‌ಬಿಐ ಆರ್‌ಎಸಿಸಿ ವಿಭಾಗದ ಮ್ಯಾನೇಜರ್ ಕಿರಣ್ ಕುಮಾರ್ ಎಂಬವರನ್ನು ಭೇಟಿಯಾಗಿದ್ದು, ಅವರು ಜ್ಯೋತಿಗೆ ಅವಾಚ್ಯ ಶಬ್ಧಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದಲ್ಲದೆ ಆರ್ಥಿಕ ನಷ್ಟವುಂಟಾಗುಂತೆ ಮಾಡಿದ್ದಾರೆಂದು ದೂರಲಾಗಿದೆ.







