ಕಾನೂನು ಬಾಹಿರವಾಗಿ ರವೀಂದ್ರ ಸೊಸೈಟಿ ಆಡಳಿತ ಮಂಡಳಿ ವಜಾ: ಮಾಸ್ ಇಂಡಿಯಾ ಆರೋಪ
ಉಡುಪಿ, ನ.18: ಸಹಕಾರ ಇಲಾಖೆ ಸಹಾಯಕ ಪ್ರಬಂಧಕ ಅರುಣ್ ಕುಮಾರ್ ಸಾಲಗಾರ ನೀಡಿದ ದೂರಿನ ಆಧಾರದ ಮೇಲೆ ಕಾನೂನು ಬಾಹಿರವಾಗಿ ಕುಕ್ಕುಂದೂರಿನ ರವೀಂದ್ರ ವಿವಿಧೋದ್ದೇಶ ಕೋ-ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಯನ್ನು ವಜಾಗೊಳಿಸಿದ್ದಾರೆ ಎಂದು ಮಾಸ್ ಇಂಡಿಯಾ ರಾಷ್ಟ್ರೀಯ ಉಪಾಧ್ಯಕ್ಷ ಜಿ.ಎ. ಕೋಟೆಯಾರ್ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲ ಸುಸ್ಥಿದಾರ ಸಂತೋಷ್ ಕುಮಾರ್ ನೀಡಿದ ದೂರಿನ ಆಧಾರದಲ್ಲಿ ಯಾವುದೇ ನೋಟಿಸ್ ನೀಡದೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು 11 ಜನ ನಿರ್ದೇಶಕರನ್ನು ಹೊಂದಿದ ಆಡಳಿತ ಮಂಡಳಿಯನ್ನು ವಜಾಗೊಳಿಸಲಾಗಿದೆ. ಕಳೆದ 17 ತಿಂಗಳಿನಿಂದ ಅರುಣ್ ಕುಮಾರ್ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾನೂನು ಪ್ರಕಾರ ಯಾವುದೇ ಸಂಸ್ಥೆಯನ್ನು ವಶಕ್ಕೆ ಪಡೆದು 6 ತಿಂಗಳಲ್ಲಿ ಹೊಸ ಆಡಳಿತ ಮಂಡಳಿ ರಚಿಸಬೇಕು. ಆದರೆ ಇಲ್ಲಿ ಸರಕಾರಿ ಅಧಿಕಾರಿ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ದೂರಿದರು.
ಸಂಘದಲ್ಲಿ 4,500 ಮಂದಿ ಸದಸ್ಯರಿದ್ದು, 8 ಶಾಖೆಗಳನ್ನು ಹೊಂದಿವೆ. ಕಳೆದ ಆರ್ಥಿಕ ವರ್ಷದಲ್ಲಿ 85 ಕೋ.ರೂ. ವ್ಯವಹಾರ ನಡೆಸಿದ್ದು, 1.60 ಲ.ರೂ. ಲಾಭಾಂಶ ಪಡೆದಿದೆ. ಸಂಸ್ಥೆ ಆಡಳಿತ ಮಂಡಳಿ ಬಗ್ಗೆ ಯಾವುದೇ ಗುರುತರ ಆರೋಪಗಳಿಲ್ಲದಿದ್ದರೂ ಸಹಾಯಕ ನಿಬಂಧಕರು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದು, ನ್ಯಾಯಾಂಗ ಹೋರಾಟ ಮುಂದುವರಿಸಲಾಗುವುದು ಎಂದು ಸಹಕಾರಿ ಸಂಘದ ನಿಕಟಪೂರ್ವ ಅಧ್ಯಕ್ಷ ರವೀಂದ್ರ ನಾಯಕ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ಸೇವಾ ಸಮಿತಿ ಪದಾಧಿಕಾರಿಗಳಾದ ದಿವಾಕರ ಕುಮಾರ್, ಗೀತಾ ಸುವರ್ಣ, ಜಯಂತಿ ನಾಯಕ್, ಭಾನುದಾಸ್ ನಾಯಕ್ ಉಪಸ್ಥಿತರಿದ್ದರು.