ಸಿಬಿಐ, ಇ.ಡಿ. ವರಿಷ್ಠರ ಅಧಿಕಾರವಧಿ ವಿಸ್ತರಣೆ ಆಧ್ಯಾದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ರಣದೀಪ್ ಸುರ್ಜೇವಾಲ

ಹೊಸದಿಲ್ಲಿ, ನ. 17: ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಸಿಬಿಐ ವರಿಷ್ಠರ ಅಧಿಕಾರಾವಧಿಯನ್ನು 2ರಿಂದ 5 ವರ್ಷ ವಿಸ್ತರಿಸಿ ಕೇಂದ್ರ ಸರಕಾರ ಹೊರಡಿಸಿದ ಆಧ್ಯಾದೇಶ ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ ಗುರುವಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದಾರೆ.
ನವೆಂಬರ್‌ನಲ್ಲಿ ಹೊರಡಿಸಲಾದ ಕೇಂದ್ರ ಜಾಗೃತ ಆಯೋಗ (ತಿದ್ದುಪಡಿ)ದ ಆಧ್ಯಾದೇಶ-2021, ದಿಲ್ಲಿ ವಿಶೇಷ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ (ತಿದ್ದುಪಡಿ) ಆಧ್ಯಾದೇಶ-2021 ಅಲ್ಲದೆ, ಜಾರಿ ನಿರ್ದೇಶನಾಲಯ, ಸಿಬಿಐ ವರಿಷ್ಠರ; ರಕ್ಷಣೆ, ಗೃಹ ಹಾಗೂ ವಿದೇಶಾಂಗ ಕಾರ್ಯದರ್ಶಿಗಳ ಅಧಿಕಾರಾವಧಿಯನ್ನು ಕೇಂದ್ರ ಸರಕಾರ ವಿಸ್ತರಿಸಲು ಸಾಧ್ಯವಾಗುವಂತೆ ಸಿಬ್ಬಂದಿ ಸಚಿವಾಲಯ ನವೆಂಬರ್ 15ರಂದು ಹೊರಡಿಸಿದ ಅಧಿಸೂಚನೆ ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.
ಇಂತಹ ಸಂಸ್ಥೆಗಳ ಸ್ವಾತಂತ್ರ್ಯದ ಖಾತರಿಗೆ ಹಾಗೂ ಇಂತಹ ಸಂಸ್ಥೆಗಳನ್ನು ಬಾಹ್ಯ ಪರಿಗಣನೆಯಿಂದ ದೂರ ಇರಿಸಲು ನ್ಯಾಯಾಲಯ ಕಾಲಕಾಲಕ್ಕೆ ನೀಡುವ ಆದೇಶಗಳನ್ನು ಈ ಆಧ್ಯಾದೇಶ ಉಲ್ಲಂಘಿಸಿದೆ ಎಂದು ಆರೋಪಿಸಿರುವ ರಣದೀಪ್ ಸುರ್ಜೇವಾಲ ಅವರು ಮಧ್ಯಂತರ ಪರಿಹಾರವನ್ನೂ ನೀಡುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ. ಈ ಆಧ್ಯಾದೇಶ ಕೇಂದ್ರ ಸರಕಾರ ಅಧಿಕಾರವನ್ನು ದುರುಪಯೋಗ ಮಾಡಿರುವುದು ಸ್ಪಷ್ಟವಾಗಿ ಬಹಿರಂಗಗೊಂಡಿದೆ ಎಂದು ಅವರು ಹೇಳಿದ್ದಾರೆ.





