3 ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ : ಪ್ರಧಾನಿ ಘೋಷಣೆ
ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರಕಾರ

ಹೊಸದಿಲ್ಲಿ,ನ.19: ದೇಶಾದ್ಯಂತ ಒಂದು ವರ್ಷಕ್ಕೂ ಅಧಿಕ ಸಮಯದಿಂದ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆಗಳ ಕೇಂದ್ರಬಿಂದುವಾಗಿರುವ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ. ಉತ್ತರ ಪ್ರದೇಶ ಮತ್ತು ಪಂಜಾಬಗಳಂತಹ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಪ್ರಧಾನಿಯವರ ಈ ಅಚ್ಚರಿಯ ಘೋಷಣೆ ಹೊರಬಿದ್ದಿರುವುದು ಮತ್ತು ಅದಕ್ಕಾಗಿ ಅವರು ಮುಖ್ಯವಾಗಿ ಪಂಜಾಬಿನಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿರುವ ಸಿಖ್ ಧರ್ಮದ ಸ್ಥಾಪಕ ಗುರು ನಾನಕ ಅವರ ಜನ್ಮದಿನವಾದ ಶುಕ್ರವಾರವನ್ನು ಆಯ್ದುಕೊಂಡಿರುವುದು ಗಮನಾರ್ಹವಾಗಿದೆ.
‘ದೇಶದ ಕ್ಷಮೆಯನ್ನು ಯಾಚಿಸುತ್ತಿದ್ದೇನೆ,ಇದೇ ವೇಳೆ ನಮ್ಮ ತಪಸ್ಸಿನಲ್ಲಿ ಏನೋ ಕೊರತೆಯಿದೆ ಎಂದು ಪ್ರಾಮಾಣಿಕ ಮತ್ತು ಶುದ್ಧ ಹೃದಯದಿಂದ ಹೇಳಲು ಬಯಸುತ್ತೇನೆ. ನಮ್ಮ ಕೆಲವು ರೈತ ಸೋದರರಿಗೆ ನಿಜವನ್ನು ದೀಪದ ಬೆಳಕಿನಂತೆ ಸ್ಪಷ್ಟವಾಗಿ ವಿವರಿಸಲು ನಮಗೆ ಸಾಧ್ಯವಾಗಲಿಲ್ಲ. ಆದರೆ ಇಂದು ಪ್ರಕಾಶ ಪರ್ವವಾಗಿದೆ ಮತ್ತು ಇದು ಯಾರನ್ನೂ ದೂಷಿಸಲು ಸಮಯವಲ್ಲ. ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂದು ದೇಶಕ್ಕೆ ಹೇಳಲು ಇಂದು ನಾನು ಬಯಸಿದ್ದೇನೆ ’ಎಂದು ಬೆಳಿಗ್ಗೆ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದ ಮೋದಿ,ಈ ತಿಂಗಳ ಅಂತ್ಯದಲ್ಲಿ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದರು.
‘ಇಂದು ಗುರು ಪರಬ್‌ನ ಪವಿತ್ರ ದಿನವಾಗಿದೆ. ನಿಮ್ಮ ಕುಟುಂಬಗಳಿಗೆ,ನಿಮ್ಮ ಹೊಲಗಳಿಗೆ ಮರಳಿ ಮತ್ತು ಹೊಸ ಆರಂಭವೊಂದನ್ನು ಮಾಡಿ. ನಾವು ಹೊಸದಾಗಿ ಮುಂದುವರಿಯೋಣ ಎಂದು ನನ್ನ ಎಲ್ಲ ಪ್ರತಿಭಟನಾನಿರತ ರೈತ ಮಿತ್ರರನ್ನು ನಾನು ಕೋರಿಕೊಳ್ಳುತ್ತಿದ್ದೇನೆ ’ಎಂದು ಮೋದಿ ಹೇಳಿದರು.
ಸರಕಾರದ ಹಟಮಾರಿ ನಿಲುವಿನಿಂದ ಕೆಳಗಿಳಿಯುವ ಮುನ್ನ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡ ಅವರು,ಮುಖ್ಯವಾಗಿ ದೇಶದಲ್ಲಿಯ ಸಣ್ಣ ಮತ್ತು ಅತಿಸಣ್ಣ ರೈತರ ಬದುಕಿನಲ್ಲಿ ಸುಧಾರಣೆಗಳನ್ನು ತರುವುದು ಈ ಕಾಯ್ದೆಗಳ ಉದ್ದೇಶವಾಗಿತ್ತು. ನಾನು ಮಾಡಿದ್ದೆಲ್ಲ ರೈತರಿಗಾಗಿ,ನಾನು ಮಾಡುತ್ತಿರುವುದೆಲ್ಲ ದೇಶಕ್ಕಾಗಿ’ಎಂದು ಹೇಳಿದರು.
ಕರಾಳ ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳಬೇಕೆಂಬ ಬೇಡಿಕೆಯೊಂದಿಗೆ ಪಂಜಾಬ,ಹರ್ಯಾಣ,ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳ ಸಾವಿರಾರು ರೈತರು ನವಂಬರ್ 2020ರಿಂದ ದಿಲ್ಲಿಯ ಹೊರಭಾಗದಲ್ಲಿ ಬೀಡು ಬಿಟ್ಟಿದ್ದಾರೆ. ಉತ್ತರದ ರಾಜ್ಯಗಳಲ್ಲಿ ಬಿಜೆಪಿ ಜನರ ತೀವ್ರ ಕ್ರೋಧಕ್ಕೆ ಗುರಿಯಾಗಿದೆ ಮತ್ತು 2024ರ ಸಾರ್ವತ್ರಿಕ ಚುನಾವಣೆಗಳು ಸೇರಿದಂತೆ ಮುಂಬರುವ ಪ್ರಮುಖ ಚುನಾವಣೆಗಳಿಗೆ ಸಜ್ಜಾಗುತ್ತಿರುವ ಬಿಜೆಪಿಗೆ ಈ ಕ್ರೋಧವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ನ.29ರಿಂದ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ಕೃಷಿ ಕಾಯ್ದೆಗಳು ರದ್ದುಗೊಳ್ಳುವವರೆಗೂ ಪ್ರತಿಭಟನಾನಿರತರು ಕಾಯಲಿದ್ದಾರೆ ಎಂದು ಹಿರಿಯ ರೈತ ನಾಯಕ ರಾಕೇಶ ಟಿಕಾಯತ್ ಸ್ಪಷ್ಟಪಡಿಸಿದರು.
ಸರಕಾರ ಮತ್ತು ರೈತರ ನಡುವಿನ ಹಲವಾರು ಸುತ್ತುಗಳ ಮಾತುಕತೆಗಳು,ಸಂಸತ್ ಕಲಾಪಗಳಿಗೆ ವ್ಯತ್ಯಯಗಳು ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಕೃಷಿ ಕಾಯ್ದೆಗಳನ್ನು ಪ್ರಶ್ನಿಸಿ ಅರ್ಜಿಗಳ ವಿಚಾರಣೆಗಳ ಹೊರತಾಗಿಯೂ ರೈತರ ಪ್ರತಿಭಟನೆಗಳು ನಿಂತಿರಲಿಲ್ಲ.
ಪ್ರತಿಪಕ್ಷಗಳು ತಮ್ಮ ಮುಂದಿನ ಕ್ರಮಗಳ ಬಗ್ಗೆ ಮರುಯೋಚಿಸುವುದು ಅನಿವಾರ್ಯವಾಗಿದೆ. ಆದರೆ ಸದ್ಯದ ಮಟ್ಟಿಗೆ ಪ್ರತಿಪಕ್ಷಗಳ ನಾಯಕರು,ಸರಕಾರದ ದುರಹಂಕಾರದ ವಿರುದ್ಧ ರೈತರು ಗೆಲುವು ಸಾಧಿಸಿದ್ದಾರೆ ಎಂದು ಬಣ್ಣಿಸಿದ್ದಾರೆ.
ಸರಕಾರವು ಹೆಚ್ಚಿನ ಚರ್ಚೆಯಿಲ್ಲದೆ ಸಂಸತ್ತಿನ ಮೂಲಕ ಮೂರು ಕೃಷಿ ಕಾಯ್ದೆಗಳನ್ನು ಹೇರಿದೆ ಎಂದು ಪ್ರತಿಪಕ್ಷ ಮತ್ತು ರೈತರು ಆರೋಪಿಸಿದ್ದರೆ,ಈ ಕಾಯ್ದೆಗಳು ಮಧ್ಯವರ್ತಿಗಳನ್ನು ನಿವಾರಿಸುತ್ತವೆ ಮತ್ತು ದೇಶದ ಯಾವುದೇ ಭಾಗದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ಅವಕಾಶ ನೀಡುವ ಮೂಲಕ ಅವರ ಆದಾಯ ಹೆಚ್ಚಳಕ್ಕೆ ನೆರವಾಗುತ್ತವೆ ಎನ್ನುವುದು ಸರಕಾರದ ಪ್ರತಿಪಾದನೆಯಾಗಿದೆ. ಈ ಕಾನೂನುಗಳು ತಮ್ಮನ್ನು ನ್ಯಾಯಸಮ್ಮತವಲ್ಲದ ಸ್ಪರ್ಧೆಗೆ ಒಡ್ಡುತ್ತವೆ,ತಮ್ಮನ್ನು ಕಾರ್ಪೊರೇಟ್‌ಗಳ ಕರುಣೆಗೆ ಬಿಡುತ್ತವೆ ಮತ್ತು ತಮ್ಮ ಉತ್ಪನ್ನಗಳಿಗೆ ಖಾತರಿ ಬೆಲೆಗಳಿಂದ ತಮ್ಮನ್ನು ವಂಚಿಸುತ್ತವೆ ಎಂದು ರೈತರು ವಾದಿಸಿದ್ದರು.
2024ಕ್ಕೆ ಮುನ್ನ ಪ್ರಮುಖ ನಿರ್ಧಾರಕವಾಗಿರುವ ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಲು ಹವಣಿಸುತ್ತಿರುವ ಬಿಜೆಪಿಯು ಕೃಷಿ ಕಾಯ್ದೆಗಳ ರದ್ದತಿ ನಿರ್ಧಾರವು ತನಗೆ ರಾಜಕೀಯ ಅನುಕೂಲವುಂಟು ಮಾಡಬಹುದು ಎಂದು ನಿರೀಕ್ಷಿಸಿದೆ.
ರೈತರ ಪ್ರತಿಭಟನೆಗಳ ಕೇಂದ್ರಬಿಂದುಗಳಲ್ಲಿ ಒಂದಾಗಿರುವ ಪಶ್ಚಿಮ ಉತ್ತರ ಪ್ರದೇಶವು ರಾಜ್ಯದ ಶೇ.25ರಷ್ಟು ವಿಧಾನಸಭಾ ಸ್ಥಾನಗಳನ್ನು ಹೊಂದಿದೆ ಮತ್ತು ತಾನು ಇಲ್ಲಿ ಕಡಿಮೆ ಮತಗಳನ್ನು ಪಡೆಯಬಹುದು ಎಂಬ ಭೀತಿ ಬಿಜೆಪಿಯನ್ನು ಕಾಡುತ್ತಿತ್ತು.
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಂತಹ ಇತರ ನಾಯಕರು ಉ.ಪ್ರದೇಶಕ್ಕೆ ಆಗಾಗ್ಗೆ ನೀಡುತ್ತಿರುವ ಭೇಟಿಗಳು ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ಗಮನ ಕೇಂದ್ರೀಕರಿಸಿದೆ ಎನ್ನುವುದನ್ನು ಪ್ರತಿಬಿಂಬಿಸುತ್ತಿವೆ.
ಪ್ರಧಾನಿಯವರ ಈ ಕ್ರಮವು ಬಿಜೆಪಿಯು ಕೃಷಿ ಕಾಯ್ದೆಗಳಿಂದಾಗಿ ತನ್ನ ದೀರ್ಘಾವಧಿಯ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳವನ್ನು ಕಳೆದುಕೊಂಡು ನಗಣ್ಯವಾಗಿರುವ ಪಂಜಾಬಿನಲ್ಲಿ ಪಕ್ಷಕ್ಕೆ ಪೂರಕವಾಗಬಹುದು. ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ತನ್ನ ಮಾಜಿ ನಾಯಕ ಅಮರಿಂದರ್ ಸಿಂಗ್ ಅವರಿಂದ ಸವಾಲನ್ನು ಎದುರಿಸುತ್ತಿದೆ. ಕಳೆದ ಸೆಪ್ಟಂಬರ್‌ನಲ್ಲಿ ಬಲವಂತದಿಂದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿಲ್ಪಟ್ಟಿದ್ದ ಸಿಂಗ್ ಅದರ ಬೆನ್ನಲ್ಲೇ ಬಿಜೆಪಿಯೊಂದಿಗೆ ಮಾತುಕತೆ ನಡೆಸಿದ್ದರು. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಕೃಷಿ ಕಾಯ್ದೆಗಳ ರದ್ದತಿಯ ಷರತ್ತನ್ನು ಅವರು ಪಕ್ಷದ ನಾಯಕರ ಮುಂದಿರಿಸಿದ್ದರು ಎನ್ನಲಾಗಿದೆ.
►ಎಲ್ಲ ರೈತರಿಗೂ ಮನದಟ್ಟು ಮಾಡಲು ಸಾಧ್ಯವಾಗದ್ದಕ್ಕೆ ನಮಗೆ ವಿಷಾದವಿದೆ. ರೈತರ ಒಂದು ವರ್ಗವು ಮಾತ್ರ ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿತ್ತು,ಆದರೆ ನಾವು ಅವರಿಗೆ ತಿಳಿಸಿ ಹೇಳಲು ಮತ್ತು ಸರಿಯಾದ ಮಾಹಿತಿಗಳನ್ನು ನೀಡಲು ಪ್ರಯತ್ನಿಸುತ್ತಲೇ ಇದ್ದೆವು.
-ಪ್ರಧಾನಿ ನರೇಂದ್ರ ಮೋದಿ
► ರೈತರ ಸತ್ಯಾಗ್ರಹವು ದುರಹಂಕಾರವನ್ನು ಸೋಲಿಸಿದೆ. ಅನ್ಯಾಯದ ವಿರುದ್ಧದ ಈ ಗೆಲುವಿಗಾಗಿ ಅಭಿನಂದನೆಗಳು
-ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ