ವರದಕ್ಷಿಣೆ ಕಿರುಕುಳ ಆರೋಪ: ಮೂವರು ಮಹಿಳೆಯರ ಸಹಿತ ನಾಲ್ವರ ಬಂಧನ
ಮಂಗಳೂರು, ನ.19: ನಗರದ ಎಮ್ಮೆಕೆರೆಯ ಮಹಿಳೆಯೊಬ್ಬರಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿ ಸಂತ್ರಸ್ತ ಮಹಿಳೆಯ ಅತ್ತೆ, ಮಾವ ಸೇರಿದಂತೆ ನಾಲ್ವರನ್ನು ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಮುಹಮ್ಮದ್ ಅಬ್ದುಲ್ ಖಾದರ್, ನಫೀಸಾ, ಉಮೈರಾ ಬಾನು, ಫಾತಿಮಾ ಮುಹಮ್ಮದ್ ಎಂಬವರನ್ನು ಬಂಧಿಸಲಾಗಿದೆ.
ವಿವರ: ಹೆಚ್ಚಿನ ವರದಕ್ಷಿಣೆ ತರುವಂತೆ ಒತ್ತಾಯಿಸಿ ತನಗೆ ಪತಿ, ಅತ್ತೆ-ಮಾವ, ನಾದಿನಿಯರು ಸೇರಿದಂತೆ ಒಂಭತ್ತು ಮಂದಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ನಗರದ ಎಮ್ಮೆಕೆರೆಯ ಫಾತಿಮಾ ಝಾಹಿದಾ (23) ಎಂಬವರು ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅದರಂತೆ ಫಾತಿಮಾ ಝಾಹಿದಾರ ಪತಿ, ಮೂಲತಃ ಉಪ್ಪಳದ ಪ್ರಸಕ್ತ ಗೋವಾದಲ್ಲಿ ನೆಲೆಸಿರುವ ಮುಹಮ್ಮದ್ ತಾಜುದ್ದೀನ್, ಮಾವ ಮುಹಮ್ಮದ್ ಅಬ್ದುಲ್ ಖಾದರ್, ಅತ್ತೆ ನಫೀಸಾ, ನಾದಿನಿ ಉಮೈರಾ ಬಾನು ಹಾಗೂ ಉಮೈರಾ ಬಾನುವಿನ ಗಂಡ ಫೈಝಲ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದಲ್ಲದೆ ತಾಜುದ್ದೀನ್ ಎರಡನೇ ಮದುವೆಯಾಗಿದ್ದು, ಎರಡನೆ ಪತ್ನಿ ನಫೀನಾ, ಆಕೆಯ ತಂದೆ ಶಾಮಿಲ್, ತಾಯಿ ಬದ್ರು ಹಾಗೂ ಮದುವೆಗೆ ಸಹಕರಿಸಿದ್ದ ಮಂಗಳೂರಿನ ರಫೀಕ್ ಎಂಬಾತನ ಮೇಲೂ ಕಾನೂನು ಕ್ರಮ ಜರುಗಿಸಬೇಕು ಎಂದು ಫಾತಿಮಾ ದೂರಿನಲ್ಲಿ ಒತ್ತಾಯಿಸಿದ್ದರು.
ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ದೂರು
ಈ ನಡುವೆ ವರದಕ್ಷಿಣೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆ ಫಾತಿಮಾ ಝಾಹಿದಾ ನೀಡಿದ ದೂರನ್ನು ಆಧರಿಸಿ ಆರೋಪಿಗಳ ಮನೆಗೆ ನೋಟಿಸ್ ನೀಡಲು ತೆರಳಿದ್ದ ಮಹಿಳಾ ಹೆಡ್‌ಕಾನ್ಸ್‌ಟೇಬಲ್ ಶ್ರೀಲತಾರ ಕರ್ತವ್ಯಕ್ಕೆ ಆರೋಪಿಗಳು ಅಡ್ಡಿಪಡಿಸಿದ ಬಗ್ಗೆ ಮಂಗಳೂರಿನ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿ ಮುಹಮ್ಮದ್ ತಾಜುದ್ದೀನ್ ನೋಟಿಸ್ ಪಡೆಯಲು ನಿರಾಕರಿಸಿದ್ದಲದೆ, ತನ್ನನ್ನು ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಹೆಡ್‌ಕಾನ್ಸ್‌ಟೇಬಲ್ ಶ್ರೀಲತಾ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.
ಅದರಂತೆ ಫಾತಿಮಾ ಝಾಹಿದಾರ ಪತಿ ಮುಹಮ್ಮದ್ ತಾಜುದ್ದೀನ್, ಮಾವ ಮುಹಮ್ಮದ್ ಅಬ್ದುಲ್ ಖಾದರ್, ಅತ್ತೆ ನಫೀಸಾ, ಮತ್ತೋರ್ವ ನಾದಿನಿ ಫಾತಿಮಾ ಮುಹಮ್ಮದ್ ಎಂಬವರ ವಿರುದ್ದ ದೂರು ದಾಖಲಾಗಿತ್ತು. ಇದೀಗ ಒಟ್ಟು ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.







