ಕೃಷಿ ಕಾಯ್ದೆ ಹಿಂಪಡೆದಿರುವುದು ತಾತ್ಕಾಲಿಕ. ಇದಕ್ಕಿಂತಲೂ ಘೋರ ಕಾಯ್ದೆಗಳನ್ನು ದೇಶದ ಮೇಲೆ ಹೇರುತ್ತಾರೆ: ಸಿದ್ದರಾಮಯ್ಯ

ಬೆಂಗಳೂರು, ನ.19: ಕೇಂದ್ರ ಸರಕಾರ ಕೃಷಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆದಿರುವುದು ತಾತ್ಕಾಲಿಕ. ಇದಕ್ಕಿಂತಲೂ ಘೋರವಾದ ಕಾಯ್ದೆಗಳನ್ನು ದೇಶದ ಮೇಲೆ ಹೇರುತ್ತಾರೆ. ಈ ಕುರಿತು ದೇಶವಾಸಿಗಳು, ಅದರಲ್ಲೂ ರೈತರು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕೇಂದ್ರ ಮತ್ತು ಹಲವು ರಾಜ್ಯಗಳಲ್ಲಿ ಚುನಾವಣೆಗಳ ಅಗ್ನಿ ಪರೀಕ್ಷೆ ಎದುರಾಗುತ್ತಿದೆ. ಹಿಟ್ಲರ್ ಶಾಹಿ ಆಡಳಿತ ಮಾಡಿದರೆ ಚುನಾವಣೆಗಳಲ್ಲಿ ಚಿಂದಿಯಾಗಿ ಹೋಗುತ್ತೇವೆ ಎಂದು ಮೋದಿ ಮತ್ತು ಅಮಿತ್ ಶಾರಿಗೆ ಬಹುಶಃ ಇಂಟೆಲಿಜೆನ್ಸ್ ಮಾಹಿತಿ ದೊರೆತಿರಬಹುದು. ಹಾಗಾಗಿ ಚುನಾವಣೆಗಳು ಮುಗಿಯಲಿ ಆಮೇಲೆ ನೋಡೋಣ ಎಂದು ರೈತ ವಿರೋಧಿ ಕಾಯ್ದೆಗಳನ್ನು ತಾತ್ಕಾಲಿಕವಾಗಿ ವಾಪಸ್ ಪಡೆದಿದ್ದಾರೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಈ ಕುರಿತು ಸಿದ್ದರಾಮಯ್ಯ ಹೇಳಿಕೆ ಇಂತಿದೆ...
ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಜನ ಕೊರೋನ ಬೆಂಕಿಯಲ್ಲಿ ನರಳುತ್ತಿದ್ದಾಗ 2020ರ ಮೇ-ಜೂನ್ ತಿಂಗಳುಗಳಲ್ಲಿ ರೈತದ್ರೋಹಿಯಾದ ಕಾಯ್ದೆಗಳಾದ ಎ ಪಿಎಂಸಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ-2020, ರೈತರೊಂದಿಗೆ ಕೃಷಿ ಬೆಲೆ ಖಾತ್ರಿ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ- 2020 ಮುಂತಾದವನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದಿತ್ತು. ರೈತರು ವೀರೋಚಿತವಾದ, ಧೀರೋದಾತ್ತವಾದ ಹೋರಾಟವನ್ನು ಮಾಡುತ್ತಾ ಬಂದರು. ಕಡೆಗೂ ಮೋದಿಯವರು ಗುರುನಾನಕ್ ಜಯಂತಿಯ ದಿನದಂದು ಈ ಜನದ್ರೋಹಿಯಾದ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಹಾಗಾಗಿ ರೈತರ ಹೋರಾಟವನ್ನು ಇಡೀ ದೇಶ ಇಂದು ಹೆಮ್ಮೆಯಿಂದ ಸ್ಮರಿಸುತ್ತಿದೆ.
ರೈತರ ದೀರ್ಘವಾದ ಹೋರಾಟಕ್ಕೆ ತಾತ್ಕಾಲಿಕ ಗೆಲವು ಲಭಿಸಿದೆ. ಇದು ತಾತ್ಕಾಲಿಕ ಗೆಲುವು ಯಾಕೆಂದರೆ ಕೇಂದ್ರ ಮತ್ತು ಹಲವು ರಾಜ್ಯಗಳಲ್ಲಿ ಚುನಾವಣೆಗಳ ಅಗ್ನಿ ಪರೀಕ್ಷೆ ಎದುರಾಗುತ್ತಿದೆ. ಹಿಟ್ಲರ್ ಶಾಹಿ ಆಡಳಿತ ಮಾಡಿದರೆ ಚುನಾವಣೆಗಳಲ್ಲಿ ನಾವು ಚಿಂದಿಯಾಗಿ ಹೋಗುತ್ತೇವೆ ಎಂದು ಮೋದಿ ಮತ್ತು ಅಮಿತ್ ಶಾ ಅವರಿಗೆ ಬಹುಶಃ ಇಂಟೆಲಿಜೆನ್ಸ್ ಮಾಹಿತಿ ದೊರೆತಿದೆ. ಹಾಗಾಗಿ ಚುನಾವಣೆಗಳು ಮುಗಿಯಲಿ ಆಮೇಲೆ ನೋಡೋಣ ಎಂದು ರೈತ ದ್ರೋಹಿ ಕಾಯ್ದೆಗಳನ್ನು ತಾತ್ಕಾಲಿಕವಾಗಿ ವಾಪಸ್ ಪಡೆದಿದ್ದಾರೆ.
ಇವರು ಆಡಳಿತ ನಡೆಸುವುದು ಅಂಬಾನಿ, ಅದಾನಿ ಮುಂತಾದವರ ಹಿತಾಸಕ್ತಿಗೆ ಮಾತ್ರ ಆಗಿರುವುದರಿಂದ ಅವರ ಹಿತಾಸಕ್ತಿಯನ್ನು ರಕ್ಷಿಸುವುದು ಮೋದಿ ಸರಕಾರದ ಮುಖ್ಯ ಉದ್ದೇಶವಾಗಿದೆ. ರೈತ ದ್ರೋಹಿಯಾದ ಕಾನೂನುಗಳನ್ನು ವಾಪಸ್ ಪಡೆದರೆ ಅಂಬಾನಿ, ಅದಾನಿ, ಧಮಾನಿ ಮುಂತಾದವರು ತುಸು ಬೇಜಾರು ಮಾಡಿಕೊಳ್ಳುತ್ತಾರೆ. ಹಾಗಾಗಿ ತಾತ್ಕಾಲಿಕವಾಗಿ ಹಿಂದೆಗೆದಂತೆ ಮಾಡಿ ಮತ್ತೆ ಇದಕ್ಕಿಂತಲೂ ಘೋರವಾದ ಕಾಯ್ದೆಗಳನ್ನು ದೇಶದ ಮೇಲೆ ಹೇರುತ್ತಾರೆ. ಈ ಕುರಿತು ದೇಶವಾಸಿಗಳು, ಅದರಲ್ಲೂ ರೈತರು ವಿಶೇಷ ಎಚ್ಚರಿಕೆ ವಹಿಸಬೇಕು.
ನಮ್ಮ ಹೆಮ್ಮೆಯ ರೈತರು ತಾವೂ ಗೆದ್ದು ದೇಶವನ್ನೂ ತುಸು ಮಟ್ಟಿಗೆ ಗೆಲ್ಲಿಸಿದ್ದಾರೆ. ಈ ದೇಶದ್ರೋಹಿ ಕಾನೂನುಗಳನ್ನು ದೇಶದ ಜನರ ಮೇಲೆ ಹೇರಿದಾಗಿನಿಂದಲೂ ಈ ಕಾನೂನುಗಳು ರೈತರ ವಿರೋಧಿಗಳು ಮಾತ್ರವಲ್ಲ, ಇವು ನಗರ, ಪಟ್ಟಣಗಳ ಬಡವರು, ಮಧ್ಯಮ ವರ್ಗದವರನ್ನು ನಾಶ ಮಾಡುವ ಕಾನೂನುಗಳು. ದೇಶದ ಕೃಷಿ ಅಂಬಾನಿ, ಅದಾನಿಗಳ ಕೈಗೆ ಹೋದರೆ, ಅವರು ಮೊನೊಪಲಿ ಸಾಧಿಸಿ ದೇಶದ ಜನರನ್ನು, ಅವರ ಆರ್ಥಿಕತೆಯನ್ನು ನಾಶ ಮಾಡಿ ಬಿಡುತ್ತಾರೆಂದು ನಾನು ಹೇಳುತ್ತಾ ಬಂದಿದ್ದೆ. ಇದರ ಜೊತೆಗೆ ರೈತ ಹೋರಾಟವನ್ನು ಬೆಂಬಲಿಸಿ ಎಂದು ಮನವಿ ಮಾಡಿದ್ದೆ. ಅದಕ್ಕಾಗಿ ಹಲವು ಮನವಿ ಪತ್ರಗಳನ್ನು ಬರೆದು ರಾಜ್ಯದ ಜನರ ಮುಂದೆ ಇಟ್ಟಿದ್ದೆ. ಹಾಗೂ“ ಬಿಜೆಪಿ ಸರ್ಕಾರಗಳ ಐದು ಕಾಯ್ದೆಗಳು; ಅಸಂಖ್ಯಾತ ಸುಳ್ಳುಗಳು” ಎಂಬ ಕಿರು ಪುಸ್ತಕ ಬರೆದು ಜನರ ಮುಂದೆ ಇಟ್ಟಿದ್ದೆ.
ಸ್ವಾತಂತ್ರ್ಯ ಹೋರಾಟದ ನಂತರ ಅಹಿಂಸೆಯ ಮಾರ್ಗದಲ್ಲಿ ನಡೆದ ಬೃಹತ್ ಹೋರಾಟವನ್ನು ನಮ್ಮ ರೈತರು ಚಳಿ, ಮಳೆ, ಸುಡುವ ಬಿಸಿಲು, ಕೊಲೆಗಡುಕ ಕೊರೋನ ಎಲ್ಲವನ್ನು ನಿಗ್ರಹಿಸಿ ದೇಶದ ಜನರಿಗೆ ಹೋರಾಟ ಮತ್ತು ಗೆಲುವಿನ ಮಹತ್ವವೇನು ಎಂದು ತೋರಿಸಿಕೊಟ್ಟಿದ್ದಾರೆ.
ಈ ಹೋರಾಟದಲ್ಲಿ ಅಪಾರ ಸಾವು ನೋವುಗಳು ಸಂಭವಿಸಿವೆ. 700ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ರೈತರ ಮೇಲೆ ಗುಂಡು ಹಾರಿಸಿ, ವಾಹನಗಳನ್ನು ನುಗ್ಗಿಸಿ ಕೊಲ್ಲಲಾಯಿತು. ಪೋಲೀಸ್ ಮುಂತಾದ ಶಕ್ತಿಗಳನ್ನು ಬಳಸಿ ದಮನಿಸಲು ಪ್ರಯತ್ನಿಸಲಾಯಿತು. ಆದರೂ ಕೂಡ ರೈತರು ಉಕ್ಕಿನಂತೆ ನಿಂತು ಸರ್ವಾಧಿಕಾರಿ ಪ್ರಭುತ್ವವನ್ನು ಸೋಲಿಸಿದ್ದಾರೆ. ಈ ಕೃಷಿ ಕಾಯ್ದೆ ವಿರುದ್ಧದ ಹೋರಾಟ ನಿರತ ರೈತರ ಮೇಲೆ ಹಾಕಿರುವ ಕೇಸುಗಳನ್ನು ಹಿಂಪಡೆಯಬೇಕು.
ನಮ್ಮ ರೈತರು ತಾವೂ ಗೆದ್ದು ಬಾಬಾ ಸಾಹೇಬರ ಸಂವಿಧಾನವನ್ನು ಮತ್ತು ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಹೋರಾಟದ ಮಾದರಿಯನ್ನೂ ಗೆಲ್ಲಿಸಿದ್ದಾರೆ. ಜೀವಂತಗೊಳಿಸಿದ್ದಾರೆ. ಇದರ ಮೂಲಕ ಸರ್ವಾಧಿಕಾರದ ಹಿಟ್ಲರ್ ಗಿರಿಯನ್ನು ಸೋಲಿಸಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಿದ್ದಾರೆ. ಈ ದೃಷ್ಟಿಯಿಂದಲೂ ರೈತರು ನಡೆಸಿದ ಹೋರಾಟ ಅವಿಸ್ಮರಣೀಯ.
ಇಷ್ಟೆಲ್ಲ ಆದರೂ ಹೋರಾಟವಿನ್ನೂ ಮುಗಿದಿಲ್ಲ ಎಂದು ಜನರಿಗೆ ಗೊತ್ತಿದೆ. ಯಾಕೆಂದರೆ ಪ್ರಧಾನಿ ಮೋದಿಯವರು “ ಕಾಯ್ದೆಗಳು ಸರಿಯಾಗಿದ್ದವು, ಆದರೆ ಅವುಗಳನ್ನು ಅರ್ಥಮಾಡಿಸುವಲ್ಲಿ ಸೋತೆವು ಎಂದು ಹೇಳಿದ್ದಾರೆ”. ತಾವು ಕೆಟ್ಟ ಮತ್ತು ಜನದ್ರೋಹಿಯಾದ ಕಾಯ್ದೆಗಳನ್ನು ತಂದಿದ್ದೆವು ಎಂದು ಅವರಿಗೆ ಗೊತ್ತಿದ್ದರೂ ಈ ಮಾತುಗಳನ್ನು ಹೇಳಿದ್ದಾರೆ. ಹಾಗಾಗಿ ಕಾಯ್ದೆಗಳ ಹಿಂದೆಗೆತ ಎಂಬುದು ತಾತ್ಕಾಲಿಕ ಎನ್ನಿಸುತ್ತಿದೆ.
ಈಗ ನಾವು ಒತ್ತಾಯಿಸಬೇಕಿರುವುದು ಕೂಡಲೆ ಸ್ವಾಮಿನಾಥನ್ ಅವರ ವರದಿಯನ್ನು ಅಂಗೀಕರಿಸಿ ವೈಜ್ಞಾನಿಕ ಬೆಲೆಗಳನ್ನು ಜಾರಿಗೊಳಿಸಬೇಕು. ನಾನು ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿರುವ ವಿಚಾರವನ್ನು ಈಗಲೂ ಒತ್ತಾಯಿಸುತ್ತೇನೆ. ರೈತರು ಬೆಳೆವ ಪ್ರತಿ ಉತ್ಪನ್ನಕ್ಕೂ ವೈಜ್ಞಾನಿಕ ಬೆಲೆ ನಿಗಧಿಗೊಳಿಸಿ ಆ ಬೆಲೆಗಳನ್ನು ಕಾನೂನುಬದ್ಧಗೊಳಿಸಬೇಕು. ಸರ್ಕಾರ ನಿಗಧಿಗೊಳಿಸಿದ ಬೆಲೆಗಳಿಗಿಂತ ಕಡಿಮೆ ದರಕ್ಕೆ ಕೊಳ್ಳುವುದನ್ನು ನಿರ್ಬಂಧಿಸಬೇಕು.
ವೈಜ್ಞಾನಿಕ ದರವು ಕೊಳ್ಳುವ ಗ್ರಾಹಕರಿಗೂ ಅನ್ವಯಿಸಬೇಕು. ಅದಾನಿ, ಅಂಬಾನಿ, ದಮಾನಿ ಮುಂತಾದ ಬೃಹತ್ ಕಾರ್ಪೊರೇಟ್ ಮಧ್ಯವರ್ತಿಗಳನ್ನು ಮುಲಾಜಿಲ್ಲದೆ ನಿರ್ಬಂಧಿಸಬೇಕು. ಇವರೆಲ್ಲ ರೈತನಿಂದ 10 ರೂಪಾಯಿಗೆ ಕೊಂಡು ಗ್ರಾಹಕರಿಗೆ 100 ರೂಪಾಯಿಗೆ ಮಾರುವ ಜನ. ಇಂಥ ದರ ಪದ್ಧತಿಯನ್ನು ಕಾನೂನಾತ್ಮಕವಾಗಿ ನಿಷೇಧಿಸಬೇಕು. ರೈತರು ಮತ್ತು ಗ್ರಾಹಕರನ್ನು ಒಂದೆ ವೇದಿಕೆಗೆ ತರುವ ವ್ಯವಸ್ಥೆಗಳನ್ನು ರೂಪಿಸಬೇಕು. ಹೋಬಳಿ, ದೊಡ್ಡ ಗ್ರಾಮ ಪಂಚಾಯತ್ ಕೇಂದ್ರಗಳಲ್ಲೂ ಎಪಿಎಂಸಿ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು.
ಅಮೆರಿಕ, ಯುರೋಪ್, ಆಸ್ಟ್ರೇಲಿಯಾ, ಚೀನಾ, ಜಪಾನ್, ನ್ಯೂಝಿಲ್ಯಾಂಡ್ ಮುಂತಾದ ದೇಶಗಳು ತಮ್ಮ ರೈತರ ರಕ್ಷಣೆಗೆ ಹಲವು ಪದ್ಧತಿಗಳನ್ನು ಅಳವಡಿಸಿಕೊಂಡಿವೆ. ನಮ್ಮಲ್ಲೂ ಅಂಥ ಪದ್ಧತಿಗಳನ್ನು ರೂಪಿಸಿ ಜಾರಿಗೊಳಿಸಬೇಕು.
ರೈತರು ಬಳಸುವ ಬೀಜ, ಗೊಬ್ಬರ, ಔಷಧ ಮುಂತಾದವುಗಳ ವ್ಯಸ್ಥೆಯನ್ನು ಬಹುರಾಷ್ಟ್ರೀಯ ಕಂಪೆನಿಗಳ ಕಪಿ ಮುಷ್ಟಿಯಿಂದ ಬಿಡಿಸಿ ಆರೋಗ್ಯಕರವಾದ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.
ಕೂಡಲೆ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ನಿಯಂತ್ರಿಸಿ ಕೇಂದ್ರ ಸರ್ಕಾರ ಅಡಿಷನಲ್ ಎಕ್ಸೈಜ್ ಡ್ಯೂಟಿಯ ಮೂಲಕ ಲೂಟಿ ಮಾಡುತ್ತಿರುವುದನ್ನು ಈ ಕೂಡಲೆ ನಿಲ್ಲಿಸಬೇಕು. ತೆರಿಗೆ ರಹಿತವಾಗಿ ಸರಬರಾಜು ಮಾಡಬೇಕು.
ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಖಾಸಗೀಕರಿಸಲು ಹೊರಟಿರುವ ವಿದ್ಯುತ್, ಇಂಧನ, ಕಲ್ಲಿದ್ದಲು ಮುಂತಾದ ರಾಷ್ಟçದ ಹಿತಾಸಕ್ತಿಯನ್ನು ಕಾಪಾಡುವ ಯಾವುದೆ ರಂಗವನ್ನು ಖಾಸಗೀಕರಣಗೊಳಿಸುವುದನ್ನು ನಿಲ್ಲಿಸಬೇಕು.
ಮೋದಿಯವರು ಕೇವಲ ಬಾಯಿ ಮಾತಿನಲ್ಲಿ ಹೇಳದೆ, ಕೂಡಲೆ ಆದೇಶಗಳನ್ನು ಹೊರಡಿಸಿ ವಾಪಸ್ಸು ಪಡೆಯಬೇಕು.
ಹುತಾತ್ಮ ರೈತರ ಕುಟುಂಬಗಳಿಗೆ ದೇಶ ಕಾಯುವ ಯೋಧರು ಹುತಾತ್ಮರಾದಾಗ ನೀಡುವ ಎಲ್ಲ ಸವಲತ್ತುಗಳನ್ನು ನೀಡಬೇಕು. ಮುಖ್ಯವಾಗಿ ಯೋಧರಿಗೆ ನೀಡಿದಷ್ಟೆ ಪರಿಹಾರ ನೀಡಬೇಕು. ಹುತಾತ್ಮರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಅವರ ಮಕ್ಕಳ ಶಿಕ್ಷಣವನ್ನು ಸರ್ಕಾರವೆ ನೋಡಿಕೊಳ್ಳಬೇಕು. ವೃದ್ಧ ತಂದೆ ತಾಯಿಗಳಿದ್ದರೆ ಅವರನ್ನು ಸರ್ಕಾರವೆ ಪೋಷಿಸಬೇಕು.
ರೈತರನ್ನು, ಪ್ರತಿಭಟನಾಕಾರರನ್ನು, ವಿರೋಧ ಪಕ್ಷಗಳನ್ನು ಆಂದೋಲನ ಜೀವಿಗಳೆಂದು, ದೇಶದ್ರೋಹಿಗಳೆಂದು ಅಣಕಿಸಿದ ಬಿಜೆಪಿ ಸರ್ಕಾರಗಳು, ಬಿಜೆಪಿಯ ಮುಖಂಡರುಗಳು ದೇಶದ ಮುಂದೆ ಬಹಿರಂಗವಾಗಿ ಕ್ಷಮೆ ಕೇಳಬೇಕು.
ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರವು ಜಾರಿಗೆ ತಂದಿರುವ ರೈತದ್ರೋಹಿಯಾದ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗಳನ್ನು ರದ್ದು ಮಾಡಬೇಕು. ಜಾನುವಾರು ಹತ್ಯಾ ಪ್ರತಿಬಂಧಕ ಕಾಯ್ದೆಗಳನ್ನು ಕೂಡಲೆ ಹಿಂಪಡೆಯಬೇಕೆದು ಆಗ್ರಹಿಸುತ್ತೇನೆ.







