"ಯುಎಪಿಎ ಪ್ರಕರಣದ ಆರೋಪಿಗಳಿಗೆ ಬೆಂಬಲವಾಗಿ ನಿಲ್ಲಬೇಕು": ಜಾಮೀನಿನ ಮೇಲೆ ಹೊರಬಂದ ಕೇರಳದ ಅಲನ್ ಶುಐಬ್, ತ್ವಾಹ ಫಸಲ್

Photo: Twitter
ಕೊಚ್ಚಿ: ಕೇರಳದ ಕೊಝಿಕ್ಕೋಡ್ನಲ್ಲಿ ನವೆಂಬರ್ 2019ರಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಜತೆ ನಂಟಿನ ಆರೋಪದ ಮೇಲೆ ಬಂಧಿತರಾಗಿ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅನ್ವಯ ಪ್ರಕರಣ ಎದುರಿಸುತ್ತಿದ್ದ ಅಲ್ಲನ್ ಶುಐಬ್ (22) ಹಾಗೂ ತ್ವಾಹ ಫಸಲ್ (26) ಎಂಬ ಇಬ್ಬರು ವಿದ್ಯಾರ್ಥಿಗಳಿಗೆ ಕಳೆದ ತಿಂಗಳಷ್ಟೇ ಸುಪ್ರೀಂ ಕೋರ್ಟಿನಿಂದ ಜಾಮೀನು ದೊರಕಿತ್ತು. ಬಿಡುಗಡೆಯ ಬಳಿಕ ಮೊದಲ ಬಾರಿಗೆ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು.
ಇಬ್ಬರನ್ನೂ ಸ್ವಾಗತಿಸಲೆಂದು ಕೊಚ್ಚಿಯ ಬೀಚ್ ಪ್ರದೇಶದಲ್ಲಿ ನಾಗರಿಕ ಹಕ್ಕು ಕಾರ್ಯಕರ್ತರ ಸಹಿತ ಹಲವು ಸಮಾನಮನಸ್ಕರು ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಇಬ್ಬರು ಯುವಕರೂ ತಮ್ಮಂತೆಯೇ ಯುಎಪಿಎ ಅನ್ವಯ ಪ್ರಕರಣ ಎದುರಿಸುತ್ತಿರುವವರ ಪರ ಹೋರಾಡುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಸುಮಾರು 572ಕ್ಕೂ ಹೆಚ್ಚು ದಿನಗಳ ಕಾಲ ಜೈಲಿನಲ್ಲಿದ್ದ ತ್ವಾಹ ಫಸಲ್ ಮಾತನಾಡಿ ತಮ್ಮನ್ನು ಬೆಂಬಲಿಸಿದ ಅಲ್ಲನ್ ಶುಐಬ್ ಹಾಗೂ ಎಲ್ಲರಿಗೂ ಧನ್ಯವಾದ ತಿಳಿಸಿದರು. "ಆದರೆ ಇದು ಸಾಲದು, ಈ ಪ್ರಕರಣದಲ್ಲಿ ಬಂಧಿತರಾದ ಇತರ ಇಬ್ಬರು-ವಿಜಿತ್ ಮತ್ತು ಉಸ್ಮಾನ್ ಇನ್ನೂ ಜೈಲಿನಲ್ಲಿದ್ದಾರೆ, ನಾವು ಅವರಿಗಾಗಿಯೂ ಮಾತನಾಡಬೇಕು" ಎಂದರು.
``ಕೇರಳದಲ್ಲಿರುವವರು ಸ್ಟಾನ್ ಸ್ವಾಮಿ ಅವರಂತಹ ಕೇರಳದ ಹೊರಗಿನ ಯುಎಪಿಎ ಆರೋಪಿಗಳಿಗೆ ನ್ಯಾಯಕ್ಕಾಗಿ ಕೋರಿದ್ದರು ಆದರೆ ಇದೇ ಕಾಯಿದೆಯಡಿ ಪ್ರಕರಣ ಎದುರಿಸುತ್ತಿರುವ ತಮ್ಮ ರಾಜ್ಯದ ಸ್ಟ್ಯಾನ್ ಸ್ವಾಮಿಗಳ ಪರ ಮಾತನಾಡುವುದಿಲ್ಲ,'' ಎಂದು ಅವರು ಹೇಳಿದರು.
ಶುಐಬ್ ಮಾತನಾಡಿ "ಕೇರಳ ಮಾನವ ಹಕ್ಕುಗಳ ಉಲ್ಲಂಘನೆಗಳಲ್ಲಿ ಯಾರಿಗೂ ಸಾಟಿಯಲ್ಲ" ಎಂದರಲ್ಲದೆ ಇತರ ಯುಎಪಿಎ ಆರೋಪಿಗಳ ಪರ ಬೇಷರತ್ತಾಗಿ ನಿಲ್ಲಬೇಕು ಎಂದರು.