ಟಿಪ್ಪರ್-ಆಟೋ ರಿಕ್ಷಾ ಮುಖಾಮುಖಿ ಢಿಕ್ಕಿ: ಒಂದೇ ಕುಟುಂಬದ ಐವರು ಮೃತ್ಯು

ಮಳವಳ್ಳಿ, ನ.19: ತಾಲೂಕಿನ ನೆಲಮಾಕನಹಳ್ಳಿ ಗ್ರಾಮದ ಗೇಟ್ ಬಳಿ ಟಿಪ್ಪರ್ ಲಾರಿ ಮತ್ತು ಆಟೋ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸೇರಿದಂತೆ ಅವರ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ತಾಲೂಕಿನ ಬಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷೆ, ದಡದಪುರ ಗ್ರಾಮದ ಮುತ್ತಮ್ಮ(45), ಅವರ ಮಗಳು ಬಸಮ್ಮಣ್ಣಿ(30), ಮಗ ವೆಂಕಟೇಶ(25), ಬಸಮ್ಮಣಿ ಅವರ ಮಕ್ಕಳಾದ ಎಂಟು ವರ್ಷದ ಚಾಮುಂಡೇಶ್ವರಿ, ಎರಡು ವರ್ಷದ ಗಂಡು ಮಗು ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ದೇವಸ್ಥಾನವೊಂದಕ್ಕೆ ಮುತ್ತಮ್ಮ ಮತ್ತು ಕುಟುಂಬದ ಸದಸ್ಯರು ಭೇಟಿ ನೀಡಿ ಮದ್ದೂರು ಕಡೆಯಿಂದ ಆಟೋದಲ್ಲಿ ವಾಪಸು ಆಗುತ್ತಿದ್ದ ವೇಳೆ ಮಳವಳ್ಳಿಯಿಂದ ಮದ್ದೂರಿನತ್ತ ತೆರಳುತ್ತಿದ್ದ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.
ಢಿಕ್ಕಿ ರಭಸಕ್ಕೆ ಆಟೋ ಸಂಪೂರ್ಣವಾಗಿ ನಜ್ಜಿಗುಜ್ಜಿಯಾಗಿದ್ದು, ಸ್ಥಳದಲ್ಲಿಯೇ ಮುತ್ತಮ್ಮ ಸೇರಿದಂತೆ ಮೂವರು ಸಾವನ್ನಪ್ಪಿದರೆ, ಇನ್ನಿಬ್ಬರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಎ.ಕೆ.ರಾಜೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







