ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಕ್ರೈಸ್ತ ಸಂಘಟನೆಗಳಿಂದ ದ.ಕ ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು, ನ.19: ಕರ್ನಾಟಕ ರಾಜ್ಯ ಸರಕಾರ ಜಾರಿಗೆ ತರಲು ಮುಂದಾಗಿರುವ ಮತಾಂತರ ನಿಷೇಧ ಕಾಯ್ದೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆದೇಶಿಸಿರುವ ಕ್ರೈಸ್ತ ಸಮುದಾಯದ ಚರ್ಚ್ ಹಾಗೂ ಸಂಘ-ಸಂಸ್ಥೆಗಳ ಗಣತಿಯ ಬಗ್ಗೆ ವಿರೋಧ ವ್ಯಕ್ತ ಪಡಿಸಿ ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ಸಂಸ್ಥೆಯ ವತಿಯಿಂದ ದ.ಕ.ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಯ ಪರವಾಗಿ ಅಪರ ಜಿಲ್ಲಾಧಿಕಾರಿ ಮಾಣಿಕ್ಯ ಮನವಿ ಸ್ವೀಕರಿಸಿದರು.
ರಾಜ್ಯ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆಗೆ ರಾಜ್ಯದ ಸಮಸ್ತ ಕ್ರೈಸ್ತ ಸಮುದಾಯದ ವಿರೋಧವಿದೆ. ಈ ಮಧ್ಯೆ ಕೇವಲ ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿ ಗಣತಿಯನ್ನು ನಡೆಸುವುದರ ಹಿಂದಿನ ಮರ್ಮವೇನು ? ಕ್ರೈಸ್ತ ಸಮುದಾಯದ ಅಂಕಿ ಅಂಶಗಳು ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರಕಾರದ ಬಳಿಯಲ್ಲಿದೆ ಎಂಬ ಮಾಹಿತಿ ಇದೆ. ಸರಕಾರದ ಈ ನಡೆಯು ಖಂಡನೀಯವಾಗಿದೆ. ಮತಾಂತರ ನಿಷೇಧ ಕಾಯ್ದೆ ಜಾರಿಯಾದರೆ ಅದು ಯಾರಿಗೂ ಒಳಿತು ಮಾಡುವುದಿಲ್ಲ ಬದಲಿಗೆ ಕೋಮುವಾದಿಗಳಿಗೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗಲು ಸುಲಭ ದಾರಿ ಮಾಡಿಕೊಡುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಹಾಗಾಗಿ ರಾಜ್ಯ ಹಿಂದುಳಿದ ವರ್ಗಗಳ ಇಲಾಖೆಯ ಆದೇಶವನ್ನು ಹಿಂಪಡೆಯಬೇಕು ಹಾಗೂ ಮತಾಂತರ ನಿಷೇಧ ಕಾಯ್ದೆಯ ಜಾರಿಯ ಚಿಂತನೆಯನ್ನು ಕೈಬಿಡಬೇಕೆಂದು ಕ್ರೈಸ್ತ ಸಮುದಾಯ ಆಗ್ರಹಿಸಿದೆ.
ನಿಯೋಗದಲ್ಲಿ ಸಿಎಸ್‌ಐ ಕೆಎಸ್‌ಡಿ ಏರಿಯಾ ಅಧ್ಯಕ್ಷ ರೆ.ಪ್ರಭುರಾಜ್, ಎಂಸಿಸಿಯ ರೆ. ಸಂದೀಪ್ ಥಿಯೋಪಿಲ್, ಆರ್ಥೊಡಾಕ್ಸ್ ಸಿರಿಯನ್‌ನ ಫಾ.ಜೋಸ್, ಬೆಳ್ತಂಗಡಿ ಧರ್ಮಪ್ರಾಂತದ ಫಾ.ಮಣಿ, ಪುತ್ತೂರು ಧರ್ಮಪ್ರಾಂತದ ಲವ್ಲಿ ಎಲ್ಡೋಸ್, ಪಾದ್ರಿಗಳಾದ ಡೊನಾಲ್ಡ್ ಮಿನೇಜಸ್ ಮತ್ತು ಐವನ್ ಮೊಂತೆರೋ, ಬಿಲೀವರ್ಸ್ ಚರ್ಚ್‌ನ ಬಿಷಪ್ ಡಿಮೆಟ್ರಿಯಸ್, ಮಾರ್ಥೊಮಾದ ರೆ.ಮಾಥ್ಯೂ, ಸಂತ ಅಂತೋನಿ ಆಶ್ರಮದ ನಿರ್ದೇಶಕ ಫಾ.ಒನಿಲ್ ಡಿಸೋಜ, ಬೆಥನಿ ಸಿಸ್ಟರ್ಸ್‌ನ ಪ್ರಾಂತೀಯ ಅಧ್ಯಕ್ಷೆ ಭಗಿನಿ ಮೇರಿಯಟ್, ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ ನ ಸಿಎಸ್‌ಐ ಮತ್ತು ಕಾರ್ಯದರ್ಶಿ ಆಲ್ಪ್ರೆಡ್ ಮನೋಹರ್, ಮಂಗಳೂರು ಕೆಥೋಲಿಕ್ ಸಭಾದ ಅಧ್ಯಕ್ಷ ಸ್ಟ್ಯಾನಿ ಲೋಬೋ, ಐಸಿವೈಎಂ ಅಧ್ಯಕ್ಷ ಜೈಸನ್ ಕ್ರಾಸ್ತಾ, ಧರ್ಮಪ್ರಾಂತದ ಆಧ್ಯಾತ್ಮಿಕ ನಿರ್ದೇಶಕ ಫಾ.ಜೆ.ಬಿ.ಸಲ್ಡಾನ್ಹಾ, ಐಸಿವೈಎಂ ನಿರ್ದೇಶಕ ಫಾ.ಅಶ್ವಿನ್ ಕಾರ್ಡೋಜಾ, ಲೇತಿ ಕಮೀಷನ್‌ನ ಕಾರ್ಯದರ್ಶಿ ಫಾ.ಜೆ.ಬಿ.ಕ್ರಾಸ್ತಾ, ಪಾಲನಾ ಪರಿಷತ್ತಿನ ಕಾರ್ಯದರ್ಶಿ ಜಾನ್ ಡಿಸಿಲ್ವಾ, ಸಿಸಿಸಿ ನಿರ್ದೇಶಕ ಫಾ. ಅನಿಲ್ ಐವನ್ ಫೆರ್ನಾಂಡಿಸ್, ಮಾಜಿ ಶಾಸಕ ಜೆ.ಆರ್ ಲೋಬೋ, ಪಿಆರ್‌ಒ ರಾಯ್ ಕ್ಯಾಸ್ತಲಿನೊ ಉಪಸ್ಥಿತರಿದ್ದರು.







