ಅಕಾಲಿಕ ಮಳೆ: 130 ಕೋಟಿ ರೂ. ಪರಿಹಾರ ಬಿಡುಗಡೆ; ಸಚಿವ ಆರ್.ಅಶೋಕ್

ಬೆಂಗಳೂರು, ನ. 19: `ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಹಾನಿಗೆ ಒಳಗಾಗಿರುವ ಪ್ರದೇಶದಲ್ಲಿ ತಕ್ಷಣವೇ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು 130 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ' ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಪ್ರವಾಹ ಪೀಡಿತ ಸ್ಥಳಗಳಲ್ಲಿ ತಕ್ಷಣವೇ ಪರಿಹಾರ ಕಾರ್ಯಗಳನ್ನು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಗತ್ಯವಿರುವ ಕಡೆ ತುರ್ತು ಪರಿಹಾರ ಕೈಗೊಳ್ಳಬೇಕು. ಮನೆ ಬಿದ್ದಿದ್ದರೆ ಕೂಡಲೇ 10 ಸಾವಿರ ರೂ. ಪರಿಹಾರ ಬಿಡುಗಡೆ ಮಾಡಲು ನಿರ್ದೇಶನ ನೀಡಿದ್ದು, ಪರಿಹಾರ ಕಾರ್ಯದಲ್ಲಿ ವಿಳಂಬ ಆಗದಂತೆ ಕ್ರಮ ವಹಿಸಲಾಗಿದೆ' ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಕ್ಕೆ ಚುನಾವಣಾ ನೀತಿ ಸಂಹಿತೆ ಯಾವುದೇ ರೀತಿಯಿಂದಲೂ ಅಡ್ಡಿಯಾಗುವುದಿಲ್ಲ. ಈಗಾಗಲೇ ಅಧಿಕಾರಿಗಳ ಜೊತೆ ಪರಿಹಾರ ಕಾರ್ಯಕ್ಕೆ ಸೂಚಿಸಿದ್ದೇನೆ ಎಂದ ಅವರು, ಎನ್‍ಡಿಆರ್‍ಎಫ್‍ನಿಂದ 13,519 ಕೋಟಿ ರೂ., ಎಸ್‍ಟಿಆರ್‍ಎಫ್‍ನಡಿಯಲ್ಲಿ 2,922 ಕೋಟಿ ರೂ.ಬಿಡುಗಡೆ ಯಾಗಿದೆ. ಒಟ್ಟು 1,58,429 ರೈತರಿಗೆ ಜುಲೈ ಮತ್ತು ಆಗಸ್ಟ್ ತಿಂಗಳಿನ ಇನ್‍ಪುಟ್ ಸಬ್ಸಿಡಿಯನ್ನು ಬಿಡುಗಡೆ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾಗಿ ವಿವಿಧೆಡೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಜಿಲ್ಲಾಧಿಕಾರಿಗಳು, ಸಿಇಒ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಸಮೀಕ್ಷೆ ನಡೆಸಬೇಕೆಂದು ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿಗಳೇ ಖುದ್ದು ಪರಿಶೀಲಿಸಿ, ಪರಿಹಾರದ ಬಗ್ಗೆ ವರದಿ ಕೊಡುವಂತೆ ಹೇಳಿದ್ದು, ನೀತಿ ಸಂಹಿತೆ ಜಾರಿ ಇರುವ ಕಾರಣ ನಾವು ಸ್ಥಳ ಪರಿಶೀಲನೆ ಹೋಗಲು ಆಗುವುದಿಲ್ಲ. ಅದಕ್ಕಾಗಿ ಶಾಸಕರು, ಸಚಿವರ ಕರೆದುಕೊಂಡು ಹೋಗದೇ, ಅಧಿಕಾರಿಗಳ ತಂಡ ಹೋಗಿ ಪರಿಶೀಲನೆ ಮಾಡಲಿದೆ ಎಂದರು.
ಕಾಫಿ ಬೆಳೆಗಳನ್ನು ಪರಿಹಾರ ಸಿಗುವ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದ ಅವರು, ಚುನಾವಣಾ ನೀತಿ ಸಂಹಿತೆ ಇರುವುದರಿಂದ ಜನಪ್ರತಿನಿಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಧಿಕಾರಿಗಳಿಗೆ ಸ್ಥಳಗಳಿಗೆ ಹೋಗಬೇಕು. ಹಳೆ ಮೈಸೂರು ಭಾಗದಲ್ಲಿ ರಾಗಿಗೆ ಹಾನಿಯಾಗಿದೆ. ಬೆಳಗಾವಿ, ಉತ್ತರ ಕರ್ನಾಟಕ ಭಾಗದಲ್ಲಿ ಹಾಗೂ ಹಾಸನ, ಮೈಸೂರು, ಮಂಡ್ಯದಲ್ಲಿ ರಾಗಿಗೆ ಹೆಚ್ಚು ಹಾನಿಯಾಗಿದೆ ಎಂದು ತಿಳಿಸಿದರು.







