ಭಯೋತ್ಪಾದಕ ಸಂಘಟನೆ ಪಟ್ಟಿಗೆ ಹಮಾಸ್: ಬ್ರಿಟನ್ ಸಂಸತ್ತಿನಲ್ಲಿ ನಿರ್ಣಯಕ್ಕೆ ನಿರ್ಧಾರ

photo:twitter/@pritipatel
ಲಂಡನ್, ನ.19: ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರ್ಪಡೆಗೊಳಿಸುವ ನಿರ್ಣಯವನ್ನು ಮುಂದಿನ ವಾರ ಬ್ರಿಟನ್ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಬ್ರಿಟನ್ ನ ಗೃಹ ಇಲಾಖೆಯ ಕಾರ್ಯದರ್ಶಿ ಪ್ರೀತಿ ಪಟೇಲ್ ಹೇಳಿದ್ದಾರೆ.
ಇದಕ್ಕೆ ಅನುಮೋದನೆ ದೊರೆತರೆ, ಹಮಾಸ್ಗೆ ಬೆಂಬಲ ನೀಡುವವರಿಗೆ ಬ್ರಿಟನ್ನಲ್ಲಿ 14 ವರ್ಷದವರೆಗೆ ಜೈಲುಶಿಕ್ಷೆ ವಿಧಿಸಲು ಅವಕಾಶವಾಗುತ್ತದೆ. ಆದರೆ ಲೇಬರ್ ಪಾರ್ಟಿಯ ಎಡಪಂಥೀಯ ಸದಸ್ಯರು ಪೆಲೆಸ್ತೀನಿಯ ಪರ ಒಲವು ಹೊಂದಿರುವುದರಿಂದ ಬ್ರಿಟನ್ನ ಪ್ರಮುಖ ವಿಪಕ್ಷ ಹಮಾಸ್ ಪರ ನಿಲುವು ತಳೆಯುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ಹಮಾಸ್ ನ ರಾಜಕೀಯ ಮತ್ತು ಸೇನಾ ವಿಭಾಗದ ನಡುವೆ ವ್ಯತ್ಯಾಸ ಪತ್ತೆಹಚ್ಚಲು ಅಸಾಧ್ಯವಾಗಿರುವುದರಿಂದ ಈ ಕ್ರಮಕ್ಕೆ ನಿರ್ಧರಿಸಲಾಗಿದೆ. ಭಯೋತ್ಪಾದಕರ ಜತೆ ಸಂಪರ್ಕ ಹೊಂದಿರುವ ಹಲವು ಗುಪ್ತಮಾಹಿತಿಯ ಆಧಾರದಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಪ್ರೀತಿ ಪಟೇಲ್ ಹೇಳಿದ್ದಾರೆ. ಈ ಮಾಹಿತಿಗಳ ಗಂಭೀರತೆಯೇ ಎಲ್ಲವನ್ನೂ ಹೇಳುತ್ತದೆ. ಹಮಾಸ್ ಮೂಲಭೂತವಾಗಿ ತೀವ್ರ ಯೆಹೂದಿ ವಿರೋಧಿಯಾಗಿದೆ. ಯೆಹೂದಿ ಸಮುದಾಯದ ರಕ್ಷಣೆಯ ಹಿನ್ನೆಲೆಯಲ್ಲಿ ಈ ಕಾನೂನುಕ್ರಮ ಅನಿವಾರ್ಯವಾಗಿದೆ ಎಂದವರು ಹೇಳಿದ್ದಾರೆ.
ಹಮಾಸ್ ನ ಸೇನಾ ವಿಭಾಗ ‘ಅಲ್-ಖಸಾಮ್ ಬ್ರಿಗೇಡ್’(ಗಾಝಾ ಪಟ್ಟಿಯ ಆಡಳಿತ ನಡೆಸುತ್ತಿದೆ) ಮೇಲೆ ಬ್ರಿಟನ್ 2001ರ ಮಾರ್ಚ್ನಿಂದ ನಿಷೇಧ ವಿಧಿಸಿದೆ. ಇದೀಗ ಹಮಾಸ್ ಮೇಲೆಯೂ ನಿಷೇಧ ವಿಧಿಸುವ ಪ್ರಸ್ತಾವನೆಗೆ ಸಂಸತ್ತಿನ ಅನುಮೋದನೆ ದೊರೆತರೆ, ಹಮಾಸ್ ಮೇಲೆ ನಿಷೇಧ ಹೇರಿರುವ ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ಗಳ ಸಾಲಿಗೆ ಬ್ರಿಟನ್ ಕೂಡಾ ಸೇರಲಿದೆ.







