ಐತಿಹಾಸಿಕ ವಿಜಯ: ರೈತರಿಗೆ ಜನವಾದಿ ಮಹಿಳಾ ಸಂಘಟನೆ ಅಭಿನಂದನೆ
ಬೆಂಗಳೂರು, ನ.19: ಅನೇಕ ಜೀವಗಳು ಹುತಾತ್ಮರಾದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ನಡೆಸಿದ ಧೈರ್ಯಶಾಲಿ ಹಾಗೂ ಶಾಂತಿಯುತ ಹೋರಾಟದ ನಂತರ ಕರಾಳ ಕೃಷಿ ಕಾನೂನುಗಳು ರದ್ಧತಿ ಮಾಡುತ್ತೇವೆ ಎಂದು ನರೇಂದ್ರ ಮೋದಿ ಸರಕಾರ ಘೋಷಿಸುವಂತೆ ಮಾಡುವಲ್ಲಿ ಯಶಸ್ಸು ಸಾಧಿಸಿದ ರೈತ ಆಂದೋಲನವನ್ನು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾವನ್ನು ಹಾಗೂ ಇಂತಹ ಐತಿಹಾಸಿಕ ಹೋರಾಟದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಸಮರಧೀರರಾಗಿ ಹೋರಾಡಿದ ಸಹಸ್ರಾರು ರೈತ ಮಹಿಳೆಯರನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಸಮಿತಿ ಅಭಿನಂದಿಸಿದೆ.
ಪ್ರಧಾನಮಂತ್ರಿ ಸಂಪೂರ್ಣ ಮೌನ ವಹಿಸಿರುವ ಲಖೀಂಪುರ್ ಖೇರಿ ಸೇರಿದಂತೆ ಹಲವು ಕಡೆ ನಡೆದ ಕ್ರೂರ ದಾಳಿಗಳಿಗೆ ಬಲಿಯಾದ ಹೋರಾಟಗಾರ ಒಡನಾಡಿಗಳನ್ನು ಮರೆಯುವಂತಿಲ್ಲ ಎಂಬ ರೈತಾಂದೋಲನದ ಸಂಕಲ್ಪವನ್ನು ಕೂಡ ನಾವು ಬೆಂಬಲಿಸುತ್ತೇವೆ. ಪ್ರಧಾನಮಂತ್ರಿ ಪ್ರಕಟಣೆಯು ಕೃಷಿ ಕಾಯ್ದೆಗಳ ರದ್ದು ಕುರಿತು ಮಾತ್ರ ಹೇಳಿದ್ದಾರೆ, ಕನಿಷ್ಠ ಬೆಂಬಲ ಬೆಲೆ ಹಾಗೂ ವಿದ್ಯುತ್ ಮಸೂದೆ ವಾಪಸ್ಸಾತಿ ಕುರಿತು ಏನನ್ನೂ ಹೇಳದಿರುವುದು ದುರದೃಷ್ಟಕರ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿ ಅಧ್ಯಕ್ಷೆ ದೇವಿ ಹಾಗೂ ಪ್ರಧಾನ ಕಾರ್ಯದರ್ಶಿ ಗೌರಮ್ಮ ತಿಳಿಸಿದ್ದಾರೆ.
ಪ್ರಸ್ತುತ ಬೆಳವಣಿಗೆ ಕುರಿತು ಸಂಯುಕ್ತ ಕಿಸಾನ್ ಮೋರ್ಚಾ ತೆಗೆದುಕೊಳ್ಳುವ ಯಾವುದೇ ತೀರ್ಮಾನಗಳನ್ನು ನಮ್ಮ ಸಂಘಟನೆ ಬೆಂಬಲಿಸುತ್ತದೆ. ಹಾಗೂ ರೈತಾಂದೋಲನದ ಜೊತೆ ನಿರಂತರವಾಗಿರುತ್ತದೆಂದು ಹೇಳಬಯಸುತ್ತದೆ. ಈ ಹಿಂದಿನಿಂದಲೂ ಹೋರಾಡಿದಂತೆ ಕಾರ್ಪೊರೇಟ್ ಶಕ್ತಿ ಹಾಗೂ ಪುರುಷ ಪ್ರಾಧಾನ್ಯದ ವಿರುದ್ಧ ನಿರ್ದಿಷ್ಟವಾಗಿ ಕೃಷಿಯಲ್ಲಿನ ಮಹಿಳೆಯರ ಸಮಸ್ಯೆಗಳ ಸುಧಾರಣೆಗೆ ಶ್ರಮಿಸುತ್ತೇವೆಂದು ಈ ಮೂಲಕ ತಿಳಿಸಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.
ದಿಲ್ಲಿಯ ಸಿಂಗೂರು ಬಾರ್ಡರ್‍ನ ಅನ್ನದಾತರ ಹೋರಾಟದ ವಿಜಯೋತ್ಸವ ಮತ್ತು ಸಭೆಯಲ್ಲಿ ದೇವಿ ಮತ್ತು ಗೌರಮ್ಮ ಭಾಗವಹಿಸಿ ಸಂತೋಷ ಹಂಚಿಕೊಂಡರು ಎಂದು ಪ್ರಕಟಣೆ ತಿಳಿಸಿದೆ.







