ಕೃಷಿಕಾಯ್ದೆಗಳ ಕುರಿತು ಕೇಂದ್ರದ ತಿಪ್ಪರಲಾಗದ ಬಳಿಕ ಈಗ ರೈತರ ಮುಂದಿನ ಹೆಜ್ಜೆಯೇನು?

ಹೊಸದಿಲ್ಲಿ,ನ.19: ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದಾರಾದರೂ ದಿಲ್ಲಿಯ ಗಡಿಗಳಲ್ಲಿಯ ಆರು ಪ್ರತಿಭಟನಾ ತಾಣಗಳನ್ನು ರೈತರು ತೆರವುಗೊಳಿಸುವುದಿಲ್ಲ ಮತ್ತು ತಕ್ಷಣವೇ ತಮ್ಮ ಮನೆಗಳಿಗೆ ಹಿಂದಿರುಗುವುದಿಲ್ಲ ಎಂದು ರೈತ ಸಂಘಟನೆಗಳ ನಾಯಕರು ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ಸನ್ನಿಹಿತವಾಗಿರುವ ಉತ್ತರ ಪ್ರದೇಶಕ್ಕೆ ಭೇಟಿ,ಸಂಸತ್ತಿನ ಚಳಿಗಾಲದ ಅಧಿವೇಶನದ ಮೇಲೆ ನಿಗಾ ಮತ್ತು ಜ.26ರಂದು ದೇಶಾದ್ಯಂತ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆಗಳ ಆಯೋಜನೆ ಸೇರಿದಂತೆ ಮುಂದಿನ 3-4 ತಿಂಗಳುಗಳಿಗಾಗಿ ತಾವು ಯೋಜನೆಗಳನ್ನು ಹೊಂದಿರುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ತಿಳಿಸಿದೆ. ಕೇಂದ್ರವು ಕೃಷಿಕಾಯ್ದೆಗಳನ್ನು ಹಿಂದೆಗೆದುಕೊಳ್ಳುವುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಶನಿವಾರ ನಡೆಯಲಿರುವ ರೈತ ನಾಯಕರ ಸಭೆಯಲ್ಲಿ ದೃಢವಾದ ಕ್ರಿಯಾಯೋಜನೆಯನ್ನು ನಿರ್ಧರಿಸಲಾಗುತ್ತದೆ.
‘ಕೃಷಿ ಕಾಯ್ದೆಗಳು ಮತ್ತು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಇವು ನಮ್ಮ ಪ್ರತಿಭಟನೆಯಲ್ಲಿನ ಎರಡು ವಿಷಯಗಳಾಗಿದ್ದವು. ಎಂಎಸ್‌ಪಿಯು ಎಲ್ಲ ರೈತರ ಮೇಲೆ ಪರಿಣಾಮ ಬೀರುವುದರಿಂದ ಮತ್ತು ಅದು ರೈತರ ಆತ್ಮಹತ್ಯೆಗಳೊಂದಿಗೂ ನಂಟು ಹೊಂದಿರುವುದರಿಂದ ಅದೂ ಪ್ರಮುಖ ವಿಷಯವಾಗಿದೆ ’ಎಂದು ಎಸ್‌ಕೆಎಂ ನಾಯಕ ದರ್ಶನ ಪಾಲ್ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು.
‘ಮೋದಿಯವರು ನಮ್ಮನ್ನು ಭೇಟಿಯಾಗಲು ನಿಯೋಗವೊಂದನ್ನು ಕಳುಹಿಸಬೇಕು ಮತ್ತು ಈಗಲೂ ಬಾಕಿಯಿರುವ ಎಲ್ಲ ವಿಷಯಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಅವುಗಳನ್ನು ನಾವು ಸೂಕ್ತವಾಗಿ ನಿರ್ವಹಿಸಬಹುದು. ‘ಬಿಜೆಪಿಯ ಐಟಿ ಘಟಕ ಮತ್ತು ವಕ್ತಾರರು ನಮ್ಮನ್ನು ನಿಂದಿಸಿದ್ದಾರೆ,ಆದರೆ ನಾವು ಸದಾ ನಮ್ಮ ಕಳವಳಗಳನ್ನು ತಾರ್ಕಿಕವಾಗಿ ಎತ್ತಿದ್ದೇವೆ ಮತ್ತು ಚರ್ಚೆಗಳಿಗಾಗಿ ಸರಕಾರವನ್ನು ಆಹ್ವಾನಿಸಿದ್ದೇವೆ. ನಮಗೆ ಮನದಟ್ಟು ಮಾಡಲು ತನ್ನ ಅಸಮರ್ಥತೆಯನ್ನು ಪ್ರಧಾನಿಗಳು ಒಪ್ಪಿಕೊಂಡಿದ್ದಾರೆ,ಅವರು ವಿಷಾದ ಮತ್ತು ಪಶ್ಚಾತ್ತಾಪವನ್ನು ವ್ಯಕ್ತಪಡಿಸಿದ್ದಾರೆ. ಈ ಸ್ವ ಟೀಕೆ ಸ್ವಾಗತಾರ್ಹವಾಗಿದೆ ’ಎಂದು ಸಿಂಗ್ ಹೇಳಿದರು.
‘ರಾಜಧಾನಿ ದಿಲ್ಲಿಯಲ್ಲಿ ಪ್ರತಿಭಟನೆಯನ್ನು ಆರಂಭಿಸಿದ ಬಳಿಕ ಮೊದಲ ಸಭೆಯಲ್ಲಿ ಮೂರು ಕೃಷಿ ಕಾಯ್ದೆಗಳು ರದ್ದುಗೊಳ್ಳುವವರೆಗೆ ಮರಳುವುದಿಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೆವು. ನಂತರ ಒಂದು ವರ್ಷದಲ್ಲಿ ಪ್ರತಿಭಟನೆಗಳ ಸಂದರ್ಭ 700 ರೈತರು ಮೃತಪಟ್ಟಿದ್ದಾರೆ ಎಂದು ಹೇಳಿದ ಸಿಂಗ್,ತನ್ನ ನಿರ್ಧಾರವನ್ನು ಮೊದಲೇ ಏಕೆ ಪ್ರಕಟಿಸಲಿಲ್ಲ ಎಂದು ಮೋದಿಯವರನ್ನು ಪ್ರಶ್ನಿಸಲು ಬಯಸುತ್ತೇನೆ. ರೈತರು ಪ್ರತಿಕೂಲ ಹವಾಮಾನ,ಸಾಂಕ್ರಾಮಿಕ,ಅಷ್ಟೇ ಏಕೆ... ಕಾನೂನು ಪ್ರಕರಣಗಳನ್ನೂ
ಎದುರಿಸುವಂತಾಗಿತ್ತು. ಹಲವಾರು ಜನರು ಮೃತಪಟ್ಟರು,ಇತರ ಹಲವಾರು ಜನರು ಅನಾರೋಗ್ಯಕ್ಕೆ ಗುರಿಯಾದರು ಎಂದರು.
ಸಂಸತ್ತಿನಲ್ಲಿ ವಿವಾದಾತ್ಮಕ ಕೃಷಿ ಕಾಯ್ದೆಗಳು ರದ್ದುಗೊಂಡ ಬಳಿಕವೇ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳುವುದಾಗಿ ಬಿಕೆಯು ನಾಯಕ ರಾಕೇಶ ಟಿಕಾಯತ್ ಅವರೂ ಹೇಳಿದ್ದಾರೆ. ಎಂಎಸ್ಪಿ ಮತ್ತು ಇತರ ವಿಷಯಗಳ ಕುರಿತು ಸರಕಾರವು ರೈತರ ಜೊತೆ ಮಾತುಕತೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.