ಬಿಹಾರ: ಕೋರ್ಟ್ ಕೊಠಡಿಯಲ್ಲಿ ಇಬ್ಬರು ಪೊಲೀಸರಿಂದ ನ್ಯಾಯಾಧೀಶರ ಮೇಲೆ ಹಲ್ಲೆ

ಸಾಂದರ್ಭಿಕ ಚಿತ್ರ
ಪಾಟ್ನಾ, ನ. 19: ಬಿಹಾರದ ಮಧುಬನಿ ಜಿಲ್ಲೆಯ ನ್ಯಾಯಾಲಯದ ಕೊಠಡಿಯಲ್ಲಿ ಗುರುವಾರ ಇಬ್ಬರು ಪೊಲೀಸರು ನ್ಯಾಯಾಧೀಶರ ಮೇಲೆ ಹಲ್ಲೆ ನಡೆಸಿದ ಹಾಗೂ ಅವರನ್ನು ಗುರಿಯಾಗಿರಿಸಿ ಬಂದೂಕು ತೋರಿಸಿ ಬೆದರಿಕೆ ಒಡ್ಡಿದ ಘಟನೆ ನಡೆದಿದೆ.
ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿ ಝಂಝಾರ್ಪುರ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಅವಿನಾಶ್ ಕುಮಾರ್ ಅವರನ್ನು ರಕ್ಷಿಸಿದರು. ಅನಂತರ ಪೊಲೀಸ್ ಸಿಬ್ಬಂದಿಯಾದ ಎಸ್ಎಚ್ಒ ಗೋಪಾಲ ಕೃಷ್ಣ ಹಾಗೂ ಸಬ್ ಇನ್ಸ್ಪೆಕ್ಟರ್ ಅಭಿಮನ್ಯು ಶರ್ಮಾ ಅವರನ್ನು ನ್ಯಾಯಾಲಯದಲ್ಲಿರುವ ಕೋಣೆಯೊಂದರಲ್ಲಿ ಕೂಡಿ ಹಾಕಿದರು. ನ್ಯಾಯಾಧೀಶರು ಸುರಕ್ಷಿತವಾಗಿದ್ದಾರೆ. ಈ ಪ್ರಕರಣವನ್ನು ಪಾಟ್ನಾ ಉಚ್ಚ ನ್ಯಾಯಾಲಯ ಗುರುವಾರ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಪರಿಗಣಿಸಿದೆ. ಅಲ್ಲದೆ, ಸ್ಥಿತಿಗತಿ ವರದಿ ಸಲ್ಲಿಸುವಂತೆ ರಾಜ್ಯ ಡಿಜಿಪಿ ಅವರಿಗೆ ಸೂಚಿಸಿದೆ.
ನವೆಂಬರ್ 29ರಂದು ನಡೆಯಲಿರುವ ಮುಂದಿನ ವಿಚಾರಣೆ ಸಂದರ್ಭ ತನ್ನ ಮುಂದೆ ಹಾಜರಾಗುವಂತೆ ಕೂಡ ನ್ಯಾಯಾಲಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದೆ. ನ್ಯಾಯಾಧೀಶರ ಮೇಲೆ ನಡೆದ ಈ ದಾಳಿ ಹಿಂದೆಂದೂ ನಡೆಯದ ಘಟನೆ ಹಾಗೂ ಆಘಾತಕಾರಿ ಎಂದು ನ್ಯಾಯಮೂರ್ತಿಗಳಾದ ರಾಜನ್ ಗುಪ್ತಾ ಹಾಗೂ ಮೋಹಿತ್ ಕುಮಾರ್ ಶಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿದೆ. ಮೇಲ್ನೋಟಕ್ಕೆ ಈ ಘಟನೆ ನ್ಯಾಯಾಂಗದ ಸ್ವಾತಂತ್ರವನ್ನು ಅಪಾಯಕ್ಕೆ ತಳ್ಳುವಂತೆ ಕಾಣುತ್ತದೆ. ಆದುದರಿಂದ ನಾವು ಪ್ರತಿಕ್ರಿಯೆ ನೀಡುವಂತೆ ಮುಖ್ಯ ಕಾರ್ಯದರ್ಶಿ, ಬಿಹಾರದ ಡಿಜಿಪಿ, ಪ್ರಾಥಮಿಕ ಕಾರ್ಯದರ್ಶಿ, ಗೃಹ ಇಲಾಖೆ ಹಾಗೂ ಮಧುಬನಿ ಎಸ್ಪಿಗೆ ನೋಟಿಸು ಜಾರಿ ಮಾಡುವುದು ಸೂಕ್ತವೆಂದು ನಿರ್ಧರಿಸಿದ್ದೇವೆ ಎಂದು ನ್ಯಾಯಾಲಯ ಹೇಳಿದೆ.







