ರಾಜ್ಯದಲ್ಲಿ ಡೆಂಗಿ, ಚಿಕೂನ್ ಗುನ್ಯ ಹೆಚ್ಚಳ

ಸಾಂದರ್ಭಿಕ ಚಿತ್ರ
ಬೆಂಗಳೂರು, ನ.19: ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯ ಜೊತೆಗೆ ಸದ್ಯ ಡೆಂಗಿ ಮತ್ತು ಚಿಕೂನ್ ಗುನ್ಯ ಅಬ್ಬರ ಹೆಚ್ಚಾಗಿದ್ದು, ಜನರನ್ನು ತತ್ತರಿಸುವಂತೆ ಮಾಡಿದೆ.
ನಿರಂತರ ಮಳೆ ಪರಿಣಾಮ ರಾಜ್ಯದಲ್ಲಿ ಈ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ. ಮಳೆಗಾಲ ಆರಂಭವಾದಾಗಿನಿಂದ ಸುಮಾರು 6 ಸಾವಿರ ಡೆಂಗಿ ಮತ್ತು ಚಿಕೂನ್ ಗುನ್ಯ ಪ್ರಕರಣಗಳು ಪತ್ತೆಯಾಗಿವೆ.
ಡೆಂಗ್ಯೂಗೆ ಕಾರಣವಾಗುವ ವೈರಸ್ನ ನಾಲ್ಕು ವಿಭಿನ್ನ, ಆದರೆ ನಿಕಟ ಸಂಬಂಧ ಹೊಂದಿರುವ ಸಿರೊಟೈಪ್ಗಳಿವೆ. ಕಾಯಿಲೆ ಆರಂಭಗೊಂಡು 3-7 ದಿನಗಳ ನಂತರ ರೋಗಿಯು ನಿರ್ಣಾಯಕ ಹಂತವನ್ನು ಪ್ರವೇಶಿಸುತ್ತಾನೆ. ಈ ಸಮಯದಲ್ಲಿ, ಜ್ವರವು ರೋಗಿಯಲ್ಲಿ ಇಳಿಯುತ್ತಿರುವಾಗ, ತೀವ್ರವಾದ ಡೆಂಗಿಗೆ ಸಂಬಂಧಿಸಿದ ಎಚ್ಚರಿಕೆಯ ಚಿಹ್ನೆಗಳು ಗೋಚರಿಸಬಹುದು. ಪ್ಲಾಸ್ಮಾ ಸೋರಿಕೆ, ದ್ರವದ ಶೇಖರಣೆ, ಉಸಿರಾಟದ ತೊಂದರೆ, ತೀವ್ರ ರಕ್ತಸ್ರಾವ ಅಥವಾ ಅಂಗಗಳ ದುರ್ಬಲತೆಯಿಂದಾಗಿ ತೀವ್ರವಾದ ಡೆಂಗ್ಯೂ ಒಂದು ಸಂಭಾವ್ಯ ಮಾರಣಾಂತಿಕ ಕಾಯಿಲೆಯಾಗಿ ಪರಿಣಮಿಸುತ್ತದೆ.
ಎಚ್ಚರಿಕೆಯ ಚಿಹ್ನೆಗಳೆಂದರೆ ತೀವ್ರವಾದ ಹೊಟ್ಟೆ ನೋವು, ನಿರಂತರ ವಾಂತಿ, ತ್ವರಿತ ಉಸಿರಾಟ, ಒಸಡುಗಳಲ್ಲಿ ರಕ್ತಸ್ರಾವ, ಆಯಾಸ, ಚಡಪಡಿಕೆ, ರಕ್ತವಾಂತಿಯಾಗಿದೆ. ಈ ವರ್ಷ ಡೆಂಗಿ ತನ್ನ ಕರಾಳ ಛಾಯೆಯನ್ನು ಪ್ರದರ್ಶಿಸಿದೆ. ಹಾಗೂ ಹೊಸದಾದ ಡೆನ್ವ್ 2ರೂಪಾಂತರದೊಂದಿಗೆ ತೀವ್ರವಾಗಿದ್ದು ಆಸ್ಪತ್ರೆಗಳಲ್ಲಿ ಡೆಂಗಿ ಪ್ರಕರಣಗಳು ಹೆಚ್ಚು ಪ್ರಮಾಣ ದಲ್ಲಿ ದಾಖಲಾಗಿವೆ. ಈ ಸೋಂಕನ್ನು ಲಘುವಾಗಿ ಪರಿಗಣಿಸಬಾರದು ಹಾಗೂ ಸರಿಯಾದ ಚಿಕಿತ್ಸೆಯನ್ನು ನೀಡದೇ ಇದ್ದಲ್ಲಿ ರೋಗಿಯು ತೀವ್ರ ಡೆಂಗಿ ಲಕ್ಷಣಗಳಿಗೆ ಗುರಿಯಾಗಿ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ.







