ಮತಾಂತರದ ಅನುಮತಿ ಸಿಗದ ಕಾರಣಕ್ಕೆ ವಿವಾಹ ನೋಂದಣಿ ತಡೆ ಹಿಡಿಯಲು ಸಾಧ್ಯವಿಲ್ಲ: ಅಲಹಾಬಾದ್ ಉಚ್ಚ ನ್ಯಾಯಾಲಯ
ಅಲಹಾಬಾದ್, ನ. 19: ಪತಿ ಅಥವಾ ಪತ್ನಿ ಮತಾಂತರಕ್ಕೆ ಜಿಲ್ಲಾ ಪ್ರಾಧಿಕಾರಗಳಿಂದ ಅನುಮತಿ ಪಡೆಯದ ಒಂದೇ ಕಾರಣಕ್ಕೆ ಅಂತರ್ ಧರ್ಮೀಯ ವಿವಾಹ ನೋಂದಣಿಯನ್ನು ವಿವಾಹ ನೋಂದಣಾಧಿಕಾರಿ ತಡೆ ಹಿಡಿಯಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯ ಗುರುವಾರ ಹೇಳಿದೆ.
ಇಬ್ಬರು ವಯಸ್ಕರು ವಿವಾಹವಾಗಲು ಪರಸ್ಪರ ಒಪ್ಪಿಕೊಂಡರೆ ಕುಟುಂಬ, ಸಮುದಾಯ ಅಥವಾ ಆಡಳಿತದ ಅನುಮತಿ ಅಗತ್ಯ ಇಲ್ಲ ಎಂದು ನ್ಯಾಯಾಲಯ ಹೇಳಿದೆ. ತಾವು ಸ್ವಂತ ಇಚ್ಛೆಯಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಂಡಿದ್ದೇವೆ ಎಂದು ಪ್ರತಿಪಾದಿಸಿದ ಅಂತರ್ ಧರ್ಮೀಯ ಸಂಬಂಧ ಹೊಂದಿರುವ 17 ಮಹಿಳೆಯರು ಸಲ್ಲಿಸಿದ ಮನವಿಗಳನ್ನು ಉಚ್ಚ ನ್ಯಾಯಾಲಯ ವಿಚಾರಣೆ ನಡೆಸಿತು.
ಇವರಲ್ಲಿ ಕೆಲವರು ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಹಾಗೂ ಇನ್ನು ಕೆಲವರು ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ತಮ್ಮ ಜೀವ, ಸ್ವಾತಂತ್ರ್ಯ ಹಾಗೂ ಯೋಗಕ್ಷೇಮಕ್ಕೆ ಬೆದರಿಕೆ ಒಡ್ಡುವ ಭೀತಿ ಉಂಟಾಗಿದೆ ಎಂದು ದೂರುದಾರರು ಹೇಳಿದ್ದಾರೆ. ಈ ಮಹಿಳೆಯರು ಆಗ್ರಹಿಸಿದರೆ ಅಥವಾ ಅಗತ್ಯವಿದ್ದರೆ ಸುರಕ್ಷತೆಯ ಖಾತರಿ ಹಾಗೂ ರಕ್ಷಣೆ ನೀಡುವಂತೆ ನ್ಯಾಯಮೂರ್ತಿ ಸುನೀತ್ ಕುಮಾರ್ ಅವರು ಪೊಲೀಸರಿಗೆ ನಿರ್ದೇಶಿಸಿದ್ದಾರೆ.
ತನ್ನ ಸಂಗಾತಿಯನ್ನು ಆಯ್ಕೆ ಮಾಡುವ ವ್ಯಕ್ತಿಯ ಹಕ್ಕಿನ ಮೇಲೆ ನಂಬಿಕೆಯ ವಿಷಯಗಳು ಪರಿಣಾಮ ಉಂಟು ಮಾಡುವುದಿಲ್ಲ. ವಿವಾಹದ ಒಳಗಡೆ ಅಥವಾ ಹೊರಗಡೆಯಾಗಿರಲಿ ಸಂಗಾತಿಯ ಆಯ್ಕೆ ಪ್ರತಿಯೊಬ್ಬ ವ್ಯಕ್ತಿಯ ವಿಶೇಷ ವ್ಯಾಪ್ತಿಯ ಒಳಗಡೆ ಇರುತ್ತದೆ. ವಿವಾಹದ ಅನ್ಯೋನ್ಯತೆ ಉಲ್ಲಂಘಿಸಲಾಗದ ಖಾಸಗಿತನದ ಮುಖ್ಯ ವಲಯದ ಒಳಗೆ ಇರುತ್ತದೆ ಎಂದು ನ್ಯಾಯಮೂರ್ತಿ ಕುಮಾರ್ ಹೇಳಿದರು.