ಪ್ರವಾಸೋದ್ಯಮ ಕ್ಷೇತ್ರದ ಪತನದಿಂದ ಏಶ್ಯಾದ 5 ದೇಶಗಳಲ್ಲಿ 1.6 ಮಿಲಿಯನ್ ಉದ್ಯೋಗ ನಷ್ಟ

ಸಾಂದರ್ಭಿಕ ಚಿತ್ರ
ಸಿಯೋಲ್, ನ.19: ಕೊರೋನ ಸೋಂಕಿನಿಂದಾಗಿ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮವಾಗಿದ್ದು ಕಳೆದ ವರ್ಷ ಏಶ್ಯಾದ 5 ದೇಶಗಳಲ್ಲಿ 1.6 ಮಿಲಿಯನ್ ಉದ್ಯೋಗ ನಷ್ಟವಾಗಿದೆ ಎಂದು ವಿಶ್ವಸಂಸ್ಥೆಯ ಸಹಸಂಸ್ಥೆ ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ(ಐಎಲ್ಒ) ವರದಿ ಹೇಳಿದೆ.
ಫಿಲಿಪ್ಪೀನ್ಸ್, ವಿಯೆಟ್ನಾಮ್, ಥೈಲ್ಯಾಂಡ್, ಬ್ರೂನೈ ಮತ್ತು ಮಂಗೋಲಿಯಾ ದೇಶಗಳ ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಮೂರನೇ ಒಂದರಷ್ಟು ಉದ್ಯೋಗಗಳು ನಷ್ಟವಾಗಿದೆ. ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಪ್ರವಾಸೋದ್ಯಮ ಕ್ಷೇತ್ರದ ಉದ್ಯೋಗ ನಷ್ಟ 4 ಪಟ್ಟು ಹೆಚ್ಚು. ಇದರಿಂದ ತೊಂದರೆಗೊಳಗಾದವರಲ್ಲಿ ಮಹಿಳೆಯರ ಪ್ರಮಾಣ ಅಧಿಕ ಎಂದು ಐಎ್ಒ ವರದಿ ತಿಳಿಸಿದೆ.
ಏಶ್ಯಾ ವಲಯದ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಕೊರೋನ ಸೋಂಕಿನ ಪ್ರಭಾವವು ಮಹಾದುರಂತಕ್ಕೆ ಸಮವಾಗಿದೆ. ಲಸಿಕೀಕರಣ ಪ್ರಕ್ರಿಯೆ ಹೆಚ್ಚಿರುವ ದೇಶಗಳು ತಮ್ಮ ಗಡಿಯನ್ನು ಕ್ರಮೇಣ ಮುಕ್ತಗೊಳಿಸಿದರೂ, ಏಶ್ಯಾ ಪೆಸಿಫಿಕ್ ದೇಶಗಳಲ್ಲಿ ಮುಂದಿನ ವರ್ಷ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಮತ್ತು ಕೆಲಸದ ಅವಧಿ ಕೊರೋನ ಸೋಂಕಿಗೂ ಹಿಂದೆ ಇದ್ದ ಪ್ರಮಾಣಕ್ಕಿಂತ ಬಹಳ ಕಡಿಮೆಯಾಗಿರಲಿದೆ ಎಂದು ಐಎಲ್ಒನ ಏಶ್ಯಾ ಪೆಸಿಫಿಕ್ ವಲಯದ ನಿರ್ದೇಶಕ ಚಿೊಕೊ ಅಸಾದ-ಮಿಯಾಕಾವ ಹೇಳಿದ್ದಾರೆ.
ಬ್ರೂನೈ ದೇಶದಲ್ಲಿ ಉದ್ಯೋಗವಕಾಶ 40% ಕುಸಿದಿದೆ ಮತ್ತು ಕೆಲಸದ ಸರಾಸರಿ ಅವಧಿಯಲ್ಲೂ 20% ಕಡಿತವಾಗಿದೆ. ಫಿಲಿಪ್ಪೀನ್ಸ್ನಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಉದ್ಯೋಗಾವಕಾಶ 28%, ಸರಾಸರಿ ಕೆಲಸದ ಅವಧಿ 38%, ವಿಯೆಟ್ನಾಮ್ನಲ್ಲಿ ಸರಾಸರಿ ವೇತನದಲ್ಲಿ 18% (ಮಹಿಳೆಯರಿಗೆ 28%) ಕಡಿತವಾಗಿದೆ. ಕೊರೋನ ಸೋಂಕಿಗೂ ಮುನ್ನ ಜಿಡಿಪಿಯ 20% ಪ್ರವಾಸೋದ್ಯಮದಿಂದ ಗಳಿಸುತ್ತಿದ್ದ ಥೈಲ್ಯಾಂಡ್ನಲ್ಲಿ ಈಗ ಸರಾರಿ ವೇತನದಲ್ಲಿ 9.5% ಕಡಿತವಾಗಿದೆ.
ಕೊರೋನ ಸೋಂಕಿಗೂ ಮೊದಲಿನ ಅವಧಿಗೆ ಹೋಲಿಸಿದರೆ 2021ರ ಸೆಪ್ಟಂಬರ್ವರೆಗೆ , ಏಶ್ಯಾದ ಬಹುತೇಕ ದೇಶಗಳಲ್ಲಿ ಪ್ರವಾಸಿಗಳ ಸಂಖ್ಯೆಯಲ್ಲಿ 99% ಇಳಿಕೆಯಾಗಿದೆ. ಮೆಕ್ಸಿಕೋ ದೇಶದಲ್ಲಿ ಈ ಪ್ರಮಾಣ 20% ಮತ್ತು ದಕ್ಷಿಣ ಯುರೋಪ್ನಲ್ಲಿ 65% ಆಗಿದೆ.
ಕೊರೋನ ಸೋಂಕಿನ ಬಿಕ್ಕಟ್ಟಿಗೂ ಮುನ್ನ, ಥೈಲ್ಯಾಂಡ್, ಹಾಂಕಾಂಗ್,ಮಲೇಶ್ಯಾ, ಕಂಬೋಡಿಯಾ ಸಹಿತ ಹಲವು ದೇಶಗಳಲ್ಲಿ ಜಿಡಿಪಿಯ ಸುಮಾರು 10% ಪಾಲು ಪ್ರವಾಸೋದ್ಯಮದ ಆದಾಯದಿಂದ ಬರುತ್ತಿತ್ತು. ಸುಮಾರು 2 ವರ್ಷಗಳಿಂದ ಈ ದೇಶಗಳಿಗೆ ಪ್ರವಾಸಿಗಳ ಆಗಮನ ಬಹುತೇಕ ಶೂನ್ಯವಾಗಿದೆ ಎಂದು ‘ಕ್ಯಾಪಿಟಲ್ ಇಕನಾಮಿಕ್ಸ್’ನ ಹಿರಿಯ ಆರ್ಥಿಕ ತಜ್ಞ ಗ್ಯಾರೆಥ್ ಲೀಥರ್ ಹೇಳಿದ್ದಾರೆ.







