ಬಂಟ್ವಾಳ: ಉರುಳಿಗೆ ಬಿದ್ದ ಚಿರತೆಯ ರಕ್ಷಣೆ

ಬಂಟ್ವಾಳ, ನ.20: ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಹೆಗಡೆಗುಳಿ ಎಂಬಲ್ಲಿ ಉರುಳಿಗೆ ಸಿಲುಕಿದ್ದ ಚಿರತೆಯೊಂದನ್ನು ಬಂಟ್ವಾಳದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ರಕ್ಷಿಸಲಾಗಿದೆ.
ಶುಕ್ರವಾರ ತಡರಾತ್ರಿವರೆಗೂ ಈ ಕಾರ್ಯಾಚರಣೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್, ಉಪ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಟಾಲ್ಕರ್ ಮಾರ್ಗದರ್ಶನದಲ್ಲಿ ನಡೆದಿದ್ದು, ಅವರ ಮಾರ್ಗದರ್ಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಂಟ್ವಾಳ ವಲಯಾರಣ್ಯಾಧಿಕಾರಿ ರಾಜೇಶ್ ಬಳಿಗಾರ್ ತಿಳಿಸಿದ್ದಾರೆ.
ಸುತ್ತ ಮನೆಗಳೇ ಇರುವ ಜಾಗದಲ್ಲಿ ಚಿರತೆಯೊಂದು ಉರುಳಿಗೆ ಸಿಲುಕಿಕೊಂಡಿತ್ತು. ಸುಮಾರು ರಾತ್ರಿ 8 ಗಂಟೆ ವೇಳೆ ಚಿರತೆ ಇರುವ ಮಾಹಿತಿ ದೊರಕಿತು. ಸ್ಥಳೀಯರ ಮಾಹಿತಿ ಆಧಾರದಲ್ಲಿ ದೊರೆತ ವಿಚಾರದಂತೆ ಕೂಡಲೇ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆ ಸುಮಾರು 4 ತಾಸುಗಳ ಪರಿಶ್ರಮದ ಬಳಿಕ ಚಿರತೆಯ ಪ್ರಜ್ಞೆ ತಪ್ಪಿಸಿ ಕೊಂಡೊಯ್ಯಲು ಸಫಲವಾಯಿತು.
ಸುಮಾರು 60 ಕೆ.ಜಿ. ತೂಕದಷ್ಟಿರುವ ಈ ಚಿರತೆಗೆ ಸೂಕ್ತ ಚಿಕಿತ್ಸೆ ನೀಡಿ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ವಲಯಾರಣ್ಯಾಧಿಕಾರಿ ತಿಳಿಸಿದ್ದಾರೆ.
ಮಂಗಳೂರಿನಿಂದ ಡಾ. ಯಶಸ್ವಿ ಮತ್ತು ವೈದ್ಯರ ತಂಡ ಮತ್ತು ಬರುವ ಇಂಜೆಕ್ಷನ್ ಕೊಟ್ಟ ಬಳಿಕ ಸುಮಾರು 15 ನಿಮಿಷದ ಬಳಿಕ ಅಮಲಿನಲ್ಲಿ ಚಿರತೆ ಮಲಗಿತು. ಬೋನಿನಲ್ಲಿ ಹಾಕಿ ಪಿಕಪ್ ನಲ್ಲಿ ತಂದು ವಲಯ ಕಚೇರಿಗೆ ತರಲಾಯಿತು ಎಂದವರು ತಿಳಿಸಿದ್ದಾರೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್, ಉಪ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಟಾಲ್ಕರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯಾರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಉಪವಲಯಾರಣ್ಯಾಧಿಕಾರಿ ಪ್ರೀತಮ್ ಎಸ್, ಯಶೋಧರ್, ಅರಣ್ಯ ರಕ್ಷಕ ಜಿತೇಶ್, ಶೋಭಿತ್, ದಯಾನಂದ್, ಅರಣ್ಯ ವೀಕ್ಷಕ ಪ್ರವೀಣ್, ಎನ್.ಇ.ಸಿ.ಎಫ್. ತಂಡದಿಂದ ಸ್ನೇಕ್ ಕಿರಣ್, ನಿತ್ಯಪ್ರಕಾಶ್ ಬಂಟ್ವಾಳ್, ಮಂಗಳೂರಿನ ಡಾ. ಯಶಸ್ವಿ ಮತ್ತು ತಂಡದವರು, ಅರಣ್ಯ ಇಲಾಖೆ ಸಿಬ್ಬಂದಿ ವರ್ಗ ಜೊತೆ ಸ್ಥಳೀಯರಾದ ಮನೋರಾಜ್ ರೈ ಕಟ್ಟೆ, ಪ್ರವೀಣ್ ಶೆಟ್ಟಿ ಉದ್ದೊಟ್ಟು ಮತ್ತಿತರರು ಉಪಸ್ಥಿತರಿದ್ದು, ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಾರೆ.










