ಶಾಶ್ವತ ಕಾಳಿ ದೇವಸ್ಥಾನ ಕಟ್ಟಲು ತನ್ನ ಜಮೀನಿನ ಭಾಗವೊಂದನ್ನು ದಾನ ನೀಡಿದ ಬಡ ಮುಸ್ಲಿಂ ರೈತ

Photo: Newindianexpress, EPS
ಕೋಲ್ಕತ್ತಾ: ಪಶ್ಚಿಮ ಬಂಗಾಳವು ಕೋಮು ವಿಭಜನೆಯಿಂದ ಕೂಡಿದ ವಿಧಾನಸಭಾ ಚುನಾವಣೆಗೆ ಸಾಕ್ಷಿಯಾದ ಆರು ತಿಂಗಳ ನಂತರ, ಬಡ ಮುಸ್ಲಿಂ ರೈತರೊಬ್ಬರು ನಾಡಿಯಾ ಜಿಲ್ಲೆಯಲ್ಲಿ ಕಾಳಿ ದೇವಸ್ಥಾನವನ್ನು ನಿರ್ಮಿಸಲು ತಮ್ಮ ಜಮೀನಿನ ಒಂದು ಭಾಗವನ್ನು ದಾನ ಮಾಡಿದ್ದಾರೆ ಎಂದು newindianexpress.com ವರದಿ ಮಾಡಿದೆ.
ಭೀಮಪುರ ಗ್ರಾಮದಲ್ಲಿ ಒಟ್ಟು ೪೫೦ ಕುಟುಂಬಗಳಿದ್ದು, ಇದರಲ್ಲಿ ೧೫೦ ಕುಟುಂಬಗಳು ಮುಸ್ಲಿಮರದ್ದಾಗಿವೆ. ಈ ಗ್ರಾಮವು ಭಾರತ ಮತ್ತು ಬಾಂಗ್ಲಾದೇಶ ಗಡಿಭಾಗದಲ್ಲಿದ್ದು, ಗ್ರಾಮದ ಹಿಂದೂ ಧರ್ಮೀಯರು ಕಾಳಿ ಪೂಜೆಗಾಗಿ ಗಡಿ ರಸ್ತೆಯ ಪಕ್ಕದಲ್ಲಿರುವ ಖಾಲಿ ಜಾಗವನ್ನು ಬಳಸುತ್ತಿದ್ದರು. ಆದರೆ ಇದಕ್ಕಾಗಿ ಅವರು ಪ್ರತಿ ವರ್ಷ ಬಿಎಸ್ಎಫ್ ನಿಂದ ಅನುಮತಿ ಪಡೆಯಬೇಕಾಗಿತ್ತು.
ಈ ವರ್ಷ, ಆರಂಭದಲ್ಲಿ ಬಿಎಸ್ಎಫ್ ಅನುಮತಿ ನೀಡಲು ಸಿದ್ಧರಿರಲಿಲ್ಲ. ಈ ವಿಷಯವು ಹನ್ನಾನ್ ಮೊಂಡಲ್ ಎಂಬ ಬಡ ರೈತನಿಗೆ ತಿಳಿದಾಗ, ಈ ಸಮಸ್ಯೆಗೊಂದು ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ಅವರು ನಿರ್ಧರಿಸಿದರು. ಕೂಡಲೇ ಅವರು ತಮ್ಮ ಜಮೀನಿನ ಭಾಗವೊಂದನ್ನು ಶಾಶ್ವತ ಕಾಳಿ ದೇವಸ್ಥಾನ ನಿರ್ಮಿಸಲು ಗ್ರಾಮಸ್ಥರಿಗೆ ದಾನ ಮಾಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಬಾಂಗ್ಲಾದೇಶದಿಂದ ವಲಸೆ ಬಂದ ಹಿಂದೂ ಧಾರ್ಮಿಕ ಪಂಗಡವಾದ ʼಮತುವಾಸ್ʼ ಪ್ರಾಬಲ್ಯ ಹೊಂದಿರುವುದರಿಂದ ವಿಧಾನಸಭೆ ಚುನಾವಣೆಗೆ ಮುನ್ನ ಈ ಜಿಲ್ಲೆ ಬಿಜೆಪಿಯ ಪ್ರಮುಖರ ಪಟ್ಟಿಯಲ್ಲಿತ್ತು. ಚುನಾವಣಾ ಪ್ರಚಾರದ ಸಮಯದಲ್ಲಿ, ಬಿಜೆಪಿ ನಾಯಕರು ʼಬಾಂಗ್ಲಾದೇಶದಲ್ಲಿ ಮುಸ್ಲಿಮರಿಂದ ಆಪಾದಿತ ದೌರ್ಜನ್ಯಗಳʼ ಬಗ್ಗೆ ಮಾತನಾಡುವ ಮೂಲಕ ಹಿಂದೂ ನಿರಾಶ್ರಿತರ ಮತದಾರರನ್ನು ಓಲೈಸಲು ಪ್ರಯತ್ನಿಸಿದ್ದರು ಮತ್ತು ವಿಭಜನೆಯ ಸಮಯದಲ್ಲಿ ಮತುವಾಗಳು ದೇಶದಿಂದ ಏಕೆ ವಲಸೆ ಹೋಗಬೇಕಾಯಿತು ಎಂಬುದನ್ನು ವಿವರಿಸಿ, ಮತಗಳನ್ನು ಸೆಳೆಯಲು ಪ್ರಯತ್ನಿಸಿದ್ದರು ಎನ್ನಲಾಗಿದೆ.
"ಇದು ಭಾರತದ ನಿಜವಾದ ಬಣ್ಣವಾಗಿದೆ. ಬಂಗಾಳವು ಯಾವಾಗಲೂ ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿದೆ ಮತ್ತು ಕೋಮು ವೈಷಮ್ಯಕ್ಕೆ ಇಲ್ಲಿ ಸ್ಥಾನವಿಲ್ಲ. ಸಹೋದರತ್ವದ ಉದಾಹರಣೆಗಾಗಿ ಹನ್ನಾನ್ಗೆ ನಾವೆಲ್ಲರೂ ಕೃತಜ್ಞರಾಗಿರುತ್ತೇವೆ" ಎಂದು ಕಾಳಿ ಪೂಜೆಯ ಅಧ್ಯಕ್ಷ ಬಿಮಲ್ ಸರ್ಕಾರ್ ಹೇಳಿದ್ದಾರೆ.
ಒಟ್ಟು ೪೬೦ ಚದರ ಅಡಿಗಳಷ್ಟು ಭೂಮಿಯನ್ನು ದೇವಸ್ಥಾನಕ್ಕೆ ದಾನ ನೀಡಿರುವ ಹನ್ನಾನ್ "ಪ್ರತಿವರ್ಷವೂ ಬಿಎಸ್ಎಫ್ ನಿಂದ ಅನುಮತಿ ಪಡೆಯುವ ಕುರಿತು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದರು. ಆದರೆ ಇದು ಜಮೀನಿನ ತೊಂದರೆಯಿಂದ ಎನ್ನುವುದನ್ನು ನಾನು ಆಲೋಚಿಸಿಯೇ ಇರಲಿಲ್ಲ. ಇನ್ನು ಅವರು ಅನುಮತಿಗಾಗಿ ಕಷ್ಟಪಡದೇ ಇರಲು ಶಾಶ್ವತ ದೇವಸ್ಥಾನ ನಿರ್ಮಾಣಕ್ಕಾಗಿ ಜಮೀನು ನೀಡಲು ನಾನು ನಿರ್ಧರಿಸಿದ್ದೇನೆ. ಇಲ್ಲಿ ಪ್ರತಿವರ್ಷ ಕಾಳಿ ಪೂಜೆ ಆಯೋಜಿಸಲಾಗುತ್ತದೆ" ಎಂದು ಹನ್ನಾನ್ ಹೇಳಿದ್ದಾರೆ.
ಹನ್ನಾನ್ ಅವರ ನಿರ್ಧಾರವನ್ನು ಸ್ವಾಗತಿಸಿದ ಭೀಮಪುರದ ಹಿಂದೂ ಧರ್ಮೀಯ ಗ್ರಾಮಸ್ಥರು, "ಈ ವರ್ಷದ ಆರಂಭದಲ್ಲಿ ಮತಗಳನ್ನು ಸೆಳೆಯಲು ಧಾರ್ಮಿಕ ಕಾರ್ಡ್ಗಳೊಂದಿಗೆ ಆಡಲು ಪ್ರಯತ್ನಿಸುತ್ತಿರುವ ರಾಜಕೀಯ ಪಕ್ಷಗಳು ಬಡವರ ಈ ನಿರ್ಧಾರಗಳನ್ನು ನೋಡಿ ಪಾಠ ಕಲಿಯಬೇಕು" ಎಂದು ಹೇಳಿದರು.
"ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರನ್ನು ಧರ್ಮದ ಆಧಾರದ ಮೇಲೆ ಧ್ರುವೀಕರಿಸುವ, ಹಿಂದೆಂದೂ ನೋಡಿರದ ಪ್ರಯತ್ನವನ್ನು ನಾವು ನೋಡಿದ್ದೇವೆ. ಆದರೆ ಹನ್ನಾನ್ ಅವರ ತ್ಯಾಗವು ಬಂಗಾಳದಲ್ಲಿ ಅಂತಹ ʼಕೆಟ್ಟ ರಾಜಕೀಯʼ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸುತ್ತದೆ" ಎಂದು ಗ್ರಾಮಸ್ಥರು ಹೇಳಿದರು.