ಹತ್ರಸ್ ಅತ್ಯಾಚಾರ ಕುರಿತ ವರದಿ: ಲಾಡ್ಲಿ ಪ್ರಶಸ್ತಿ ಪಡೆದ ʼದಿ ವೈರ್ʼ ಪತ್ರಕರ್ತೆ ಇಸ್ಮತ್ ಅರಾ

Photo: Thewire.in
ಹೊಸದಿಲ್ಲಿ: ದಿ ವೈರ್ ಸುದ್ದಿ ತಾಣದ ಪತ್ರಕರ್ತೆ ಇಸ್ಮತ್ ಅರಾ ಅವರಿಗೆ "ವೆಬ್ ತನಿಖಾ ವರದಿ" ವಿಭಾಗದಲ್ಲಿ ಲಾಡ್ಲಿ ಪ್ರಶಸ್ತಿ ಲಭಿಸಿದೆ.
ಹತ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಗೆ ಸಂಬಂಧಿಸಿದ ಮೆಡಿಕೋ-ಲೀಗರ್ ವರದಿಗೆ ಸಂಬಂಧಿಸಿದ ಸೂಕ್ಷ್ಮತೆಗಳ ಕುರಿತಾಗಿ ಆಕೆ ಬರೆದಿರುವ "ಆಲಿಘರ್ ಹಾಸ್ಪಿಟಲ್ ಎಂಎಲ್ಸಿ ರಿಪೋರ್ಟ್ ಆನ್ ಹತ್ರಸ್ ವಿಕ್ಟಿಮ್ ಶ್ಯಾಟರ್ಸ್ ಯುಪಿ ಪೊಲೀಸ್ಸ್ ನೋ ರೇಪ್ ಕ್ಲೇಮ್" ಎಂಬ ವರದಿಗೆ ಈ ಪ್ರಶಸ್ತಿ ಲಭಿಸಿದೆ.
ವೆಬ್ ಬ್ಲಾಗ್ ವಿಭಾಗದಲ್ಲಿ ಸುಭಿಕ್ಷಾ ಮನೋಜ್ ಮತ್ತು ಭಾರತಿ ಕಣ್ಣನ್ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ಕೋವಿಡ್ ಸಾಂಕ್ರಾಮಿಕದ ನಡುವೆ ಋತುಚಕ್ರ ಸಮಸ್ಯೆ ಮತ್ತು ಮಾನಸಿಕ ಆರೋಗ್ಯ ಕುರಿತಾದ ಲೇಖನಕ್ಕೆ ಈ ಪ್ರಶಸ್ತಿ ಲಭಿಸಿದ್ದು ಲೇಖನಗಳು ಲೈವ್ವೈರ್ ನಲ್ಲಿ ಪ್ರಕಟವಾಗಿದ್ದವು. ಸುಭಿಕ್ಷಾ ಅವರ ಲೇಖನ "ಕೋಪಿಂಗ್ ವಿದ್ ಪ್ಯಾಂಡಮಿಕ್ ಸ್ಟ್ರೆಸ್, ಮೆಂಟಲ್ ಹೆಲ್ತ್ ಎಂಡ್ ಮೆಂಟಲ್ ಡಿಸಾಡರ್ಸ್ ಇನ್ 2020" ಅನ್ನು ಬೂಂಧ್ ಸಹಯೋಗದೊಂದಿಗೆ ಬರೆಯಲಾಗಿತ್ತು.
ಲಾಡ್ಲಿ ಮೀಡಿಯಾ ಎಂಡ್ ಅಡ್ವರ್ಟೈಸಿಂಗ್ ಪ್ರಶಸ್ತಿಗಳನ್ನು ಪಾಪ್ಯುಲೇಶನ್ ಫಸ್ಟ್ ಎಂಬ ಸಂಸ್ಥೆ 2007ರಿಂದ ನೀಡುತ್ತಿದ್ದು ಲಿಂಗಾಧರಿತ ಸಂವೇದಿತನವನ್ನು ತಮ್ಮ ಕರ್ತವ್ಯದ ಅವಿಭಾಜ್ಯ ಅಂಗವನ್ನಾಗಿಸುವ ಮಾಧ್ಯಮ ಮಂದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.





