ಶ್ರೀಕಿ ಕಾಂಗ್ರೆಸ್ ಮುಖಂಡರ ಮಕ್ಕಳಿಗೆ ಡ್ರಗ್ಸ್ ನೀಡುತ್ತಿದ್ದ: ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪ

ಕಲಬುರಗಿ, ನ. 20: `ಬಿಟ್ ಕಾಯಿನ್ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಶ್ರೀಕೃಷ್ಣ ಯಾನೆ ಶ್ರೀಕಿ ಕಾಂಗ್ರೆಸ್ ಮುಖಂಡರ ಮಕ್ಕಳಿಗೆ ಮಾದಕ ದ್ರವ್ಯಗಳನ್ನು (ಡ್ರಗ್ಸ್) ತರಿಸಿಕೊಡುತ್ತಿದ್ದು, ಗೋವಾದಲ್ಲಿ ಕಾಂಗ್ರೆಸ್ ಮುಖಂಡರ ಜೊತೆಗೆ ಶ್ರೀಕಿ ಕಾಣಿಸಿಕೊಂಡಿದ್ದ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ಬಿಟ್ ಕಾಯಿನ್ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿಯನ್ನು ಹಿಡಿದು ತನಿಖೆ ಮಾಡುತ್ತಿರುವುದೇ ತಪ್ಪು ಎನ್ನುವ ಹಾಗೆ ಕಾಂಗ್ರೆಸ್ ಮುಖಂಡರು ಮಾತನಾಡುತ್ತಿದ್ದಾರೆ. ತನಿಖೆ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ. ಈ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೆ ಇಲ್ಲ' ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಣೆ ನೀಡಿದರು.
`ಬಿಟ್ ಕಾಯಿನ್ ಪ್ರಕರಣದಲ್ಲಿ ಸಿಎಂ ತಲೆದಂಡ ಆಗುತ್ತದೆ' ಎಂಬ ಶಾಸಕ ಪ್ರಿಯಾಂಕ್ ಖರ್ಗೆ ಸರಿಯಲ್ಲ. ಪ್ರಿಯಾಂಕ್ ತಮ್ಮ ಪಾಂಡಿತ್ಯ ಪ್ರದರ್ಶನ ಮಾಡುತ್ತಿದ್ದಾರೆ. ನೀವು ಐಟಿ-ಬಿಟಿ ಸಚಿವರಿದ್ದಾಗ ಏಕೆ ಈ ಪ್ರಕರಣವನ್ನು ಪತ್ತೆ ಮಾಡಲಿಲ್ಲ. ಅವನು ಹ್ಯಾಕರ್ ಎಂದು ನಿಮಗೆ ಗೊತ್ತಾಗಲಿಲ್ಲವೇ? ಎಂದು ಪ್ರಶ್ನಿಸಿದ ಆರಗ ಜ್ಞಾನೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಏನು ಮಾಡದೇ ಇದೀಗ ನಮ್ಮ ಅವಧಿಯಲ್ಲಿ ಆತನನ್ನು ಬಂಧಿಸಿ ತನಿಖೆ ಮಾಡುವ ವೇಳೆ ಇವರು ಪ್ರಶ್ನಿಸುತ್ತಿದ್ದಾರೆ ಎಂದು ಟೀಕಿಸಿದರು.







