ದಿವ್ಯಾಂಗರಿಗೆ ಸರಕಾರದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ: ರಾಜ್ಯಪಾಲ ಗೆಹ್ಲೋಟ್

ಬೆಂಗಳೂರು, ನ. 20: `ಕೇಂದ್ರ ಮತ್ತು ರಾಜ್ಯ ಸರಕಾರಗಳು ದಿವ್ಯಾಂಗರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ದಿವ್ಯಾಂಗರು ಸರಕಾರದ ಯೋಜನೆಗಳು ಹಾಗೂ ಸವಲತ್ತುಗಳು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಜೀವನವನ್ನು ಸುಧಾರಿಸಿಕೊಳ್ಳಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಯೋಜನೆಗಳ ಬಗ್ಗೆ ದಿವ್ಯಾಂಗರಿಗೆ ಅರಿವು ಮೂಡಿಸಬೇಕು' ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದ್ದಾರೆ.
ಶನಿವಾರ ನಗರದ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್‍ನ ಆಯುರ್ವೇದ ಆಸ್ಪತ್ರೆಯಲ್ಲಿ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್, ಭಗವಾನ್ ಮಹಾವೀರ್ ವಿಕಲಾಂಗ್ ಸಹಾಯತಾ ಸಮಿತಿ, ರೋಟರಿ ಕ್ಲಬ್ ಬೆಂಗಳೂರು, ಎಸ್‍ಬಿಐ ಮ್ಯೂಚುವಲ್ ಫಂಡ್ ಜಂಟಿಯಾಗಿ ಆಯೋಜಿಸಿದ್ದ ಉಚಿತ ಗಾಲಿಕುರ್ಚಿ ವಿತರಣೆಯ ಮೆಗಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ದಿವ್ಯಾಂಗರು ಇತರರಿಗಿಂತ ವಿಶೇಷ ಸಾಮಥ್ರ್ಯ ಹೊಂದಿರುತ್ತಾರೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪಾಲುದಾರರನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಪ್ರಧಾನಿ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಮಂತ್ರವನ್ನು ಅರಿತುಕೊಂಡ ಭಾರತ ಸರಕಾರವು ಸಮಾಜದಲ್ಲಿನ ದಿವ್ಯಾಂಗರು ಸೇರಿದಂತೆ ದೇಶದ ಪ್ರತಿಯೊಬ್ಬ ನಾಗರಿಕನ ಬೆಳವಣಿಗೆಗಾಗಿ ಅಭೂತಪೂರ್ವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ವಿಕಲಚೇತನರ ಸಬಲೀಕರಣ ಇಲಾಖೆಯಲ್ಲಿ ವಿವಿಧ ಯೋಜನೆಗಳ ಮೂಲಕ ದೇಶಾದ್ಯಂತ 1,0668ಕ್ಕೂ ಹೆಚ್ಚು ಶಿಬಿರಗಳನ್ನು ಆಯೋಜಿಸಿ, 20 ಲಕ್ಷ 35 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಪರಿಕರಗಳನ್ನು ಒದಗಿಸಲಾಗಿದೆ. ಅಲ್ಲದೆ, ಸರಕಾರ ಹಿರಿಯ ನಾಗರಿಕರಿಗೆ ಕಾನೂನು ರೂಪಿಸುವ ಜತೆಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಅವರು ಮಾಹಿತಿ ನೀಡಿದರು.
ದಿವ್ಯಾಂಗರ ಸಬಲೀಕರಣಕ್ಕಾಗಿ ಸರಕಾರದ ಜತೆಗೆ ಹಲವು ಸ್ವಯಂಸೇವಾ ಸಂಸ್ಥೆಗಳೂ ಶ್ರಮಿಸುತ್ತಿವೆ. ಭಗವಾನ್ ಮಹಾವೀರ್ ವಿಕಲಾಂಗ್ ಸಹಾಯತಾ ಸಮಿತಿಯು ದಿವ್ಯಾಂಗರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವದ ಅತಿದೊಡ್ಡ ಸರಕಾರೇತರ ಸಂಸ್ಥೆಯಾಗಿದೆ. ಸಂಸ್ಥೆಯು 1975ರಲ್ಲಿ ರಾಜಸ್ಥಾನದ ಜೈಪುರದಲ್ಲಿ ಸ್ಥಾಪನೆಯಾಯಿತು, ಅಂದಿನಿಂದ ಇಲ್ಲಿಯವರೆಗೂ ಅನೇಕ ಸಾಧನೆಗಳನ್ನು ಮಾಡಿದೆ. 46 ವರ್ಷಗಳಲ್ಲಿ ಸುಮಾರು 20 ಲಕ್ಷ ದಿವ್ಯಾಂಗರಿಗೆ ಸಂಸ್ಥೆಯಿಂದ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆರ್ಥಿಕವಾಗಿ ಬಡತನ ಹೊಂದಿರುವ ಕುಟುಂಬದವರು ಈ ಪ್ರಯೋಜನ ಪಡೆದುಕೊಂಡಿದ್ದಾರೆ. ಇಂಡಿಯಾ ಫಾರ್ ಹ್ಯೂಮಾನಿಟಿ ಪ್ರಾಜೆಕ್ಟ್ ಅಡಿಯಲ್ಲಿ ಅನೇಕ ಶಿಬಿರಗಳನ್ನು ಆಯೋಜಿಸುವ ಮೂಲಕ ಇಡೀ ವಿಶ್ವದಲ್ಲೇ ದೇಶದ ಗೌರವ ಹೆಚ್ಚಿಸಿರುವುದು ಹೆಮ್ಮೆಯ ಸಂಗತಿ. ಸಂಸ್ಥೆಯ ಕಾರ್ಯಕ್ಕೆ ಅಭಿನಂದನೀಯ ಎಂದು ಮೆಚ್ಚುಹೆ ವ್ಯಕ್ತಪಡಿಸಿದರು.
ಇದೇ ರೀತಿ ದಿವ್ಯಾಂಗರನ್ನು ಗುರುತಿಸಿ, ಸರಕಾರದ ಸೌಲಭ್ಯಗಳನ್ನು ಒದಗಿಸಿದರೆ, ಅವರ ಮುಖದಲ್ಲಿ ಸಂತೋಷ ಮೂಡಿ ಬರುವುದರ ಜೊತೆಗೆ ಸ್ವಾಭಿಮಾನದ ಬದುಕು ಜೀವಿಸಲು ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಆರ್ಟ್ ಆಫ್ ಲಿವಿಂಗ್‍ನ ರವಿಶಂಕರ್ ಗುರೂಜಿ, ಭಗವಾನ್ ಮಹಾವೀರ್ ವಿಕಲಾಂಗ್ ಸಹಾಯತಾ ಸಮಿತಿ ಸಂಸ್ಥಾಪಕ ಡಿ.ಆರ್ ಮೆಹ್ತಾ, ರೋಟರಿ ಸಂಸ್ಥೆಯ ಜಿಲ್ಲಾ ಗವರ್ನರ್ ಫಾಜಲ್ ಮೊಹಮ್ಮದ್, ರೋಟರಿ ಕ್ಲಬ್ ಬೆಂಗಳೂರು ಜಿಲ್ಲಾಧ್ಯಕ್ಷ ನರ್ಮದಾ ನಾರಾಯಣ, ಆರ್ಟ್ ಆಫ್ ಲಿವಿಂಗ್ ಟ್ರಸ್ಟ್‍ನ ಅಧ್ಯಕ್ಷ ಹರ್ಷ, ಎಸ್‍ಬಿಐನ ಗುರುಪ್ರೀತ್ ಸಿಂಗ್ ಉಪಸ್ಥಿತರಿದ್ದರು.







