ಚುನಾವಣೆಯಲ್ಲಿ ಸೋತಿದ್ದಕ್ಕೆ ಕೃಷಿ ಕಾಯ್ದೆ ವಾಪಸ್: ಸಲೀಂ ಅಹ್ಮದ್

ಬೆಂಗಳೂರು, ನ. 20: ಪ್ರಧಾನಿ ಮೋದಿಯವರು ತಮ್ಮ ಕಾರ್ಪೊರೇಟ್ ಸ್ನೇಹಿತರನ್ನು ಉದ್ಧಾರ ಮಾಡಲು ಹಾಗೂ ತಮ್ಮ ಧಣಿಗಳ ಆದೇಶ ಪಾಲಿಸುತ್ತಾ ತಂದಿದ್ದ ರೈತ ವಿರೋಧಿ ಕಾನೂನಿನ ವಿರುದ್ಧ ಮಾಡಿದ ರೈತರ ಹೋರಾಟಕ್ಕೆ ಜಯ ಸಿಕ್ಕಿದೆ. ಕೇಂದ್ರ ಸರಕಾರ ಈಗ ಕೃಷಿ ಕಾಯ್ದೆ ವಾಪಸ್ ಪಡೆದಿದೆ. ಇದು ಪ್ರಜಾಪ್ರಭುತ್ವ ಗೆಲುವಾಗಿದೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಬಣ್ಣಿಸಿದ್ದಾರೆ.
ಶನಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, `ಮೋದಿ ಅವರು ಸರ್ವಾಧಿಕಾರಿ ಧೋರಣೆಯಿಂದ ಜಾರಿಗೆ ತಂದ ಕಾಯ್ದೆ ವಿರುದ್ಧ ಹೋರಾಟ ಮಾಡಿ ಸುಮಾರು 700ಕ್ಕೂ ಹೆಚ್ಚು ಮಂದಿ ರೈತರು ಹುತಾತ್ಮರಾದರು. ಅಹಂ ಬ್ರಹ್ಮಾಸ್ಮಿ ಎಂದು ಪ್ರಧಾನಿ ತಿಳಿದು ಅನೇಕ ಕಾನೂನು ಜಾರಿಗೆ ತಂದಿದ್ದರು. ತಾವು ಮಾಡಿದ್ದೇ ಸರಿಯೆಂಬ ದಾಟಿಯಲ್ಲಿದ್ದರು. ರೈತರ ಹೋರಾಟಕ್ಕೆ ಈಗ ಜಯ ಸಿಕ್ಕಿದೆ. ಇವರು ಚುನಾವಣೆ ದೃಷ್ಟಿಯಿಂದ ಕಾಯ್ದೆ ಹಿಂಪಡೆದಿದ್ದಾರೆ. ಚುನಾವಣೆಯಲ್ಲಿ ಸೋತಿದ್ದಕ್ಕೆ ತೈಲಬೆಲೆ ಕಡಿಮೆ ಮಾಡಿದ್ದರು. ತೈಲ ಬೆಲೆಯನ್ನು ಇನ್ನೂ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
`ಈ ಕರಾಳ ಕಾಯ್ದೆಯಿಂದ ಹುತಾತ್ಮರಾದ ರೈತ ಕುಟುಂಬಗಳಿಗೆ 25 ಲಕ್ಷ ರೂ.ಪರಿಹಾರ ನೀಡಬೇಕು. ರೈತ ವಿರೋಧಿ ಕಾಯ್ದೆ ಹಿಂಪಡೆದ ವಿಚಾರವಾಗಿ ಪಕ್ಷವು ಕಿಸಾನ್ ವಿಜಯ ದಿವಸ್ ಅನ್ನು ರಾಜ್ಯಾದ್ಯಂತ ಆಚರಣೆ ಮಾಡಲಾಗುವುದು ಎಂದ ಅವರು, ಸುದೀರ್ಘ ಅವಧಿಯ ಹೋರಾಟ ಮೂಲಕ ರೈತರ ಜಯಗಳಿಸಿದ್ದು, ಮೋದಿಯನ್ನು ಮಣಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಬಿಜೆಪಿ ಬೆತ್ತಲಾಗಿದೆ: ಗುತ್ತಿಗೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗೆ ಪತ್ರ ಬರೆದಿರುವುದನ್ನು ನೋಡಿದರೆ ಬಿಜೆಪಿ ಸರಕಾರ ಬೆತ್ತಲಾಗಿದೆ. ಬೇರೆ ಪಕ್ಷಗಳ ಆಡಳಿತವಿದ್ದ ಸಂದರ್ಭದಲ್ಲಿ ಟೀಕೆ ಮಾಡುತ್ತಿದ್ದ ಪ್ರಧಾನಿ ಮೋದಿಯವರು ಇದೀಗ ಇದಕ್ಕೆ ಉತ್ತರ ನೀಡಬೇಕಾಗುತ್ತದೆ. `ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ' ಎಂಬಂತೆ ಈ ಅಕ್ರಮಕ್ಕೆ ಸಂಬಂಧಿಸಿದಂತೆ ಮೋದಿ ಪ್ರತಿಕ್ರಿಯಿಸಬೇಕಿದೆ ಎಂದು ಸಲೀಂ ಅಹ್ಮದ್ ಆಗ್ರಹಿಸಿದರು.







