ಶೇ.95ರಷ್ಟು ದೂರುಗಳಿಗೆ ನ್ಯಾಯ: ಉಡುಪಿ ಬಳಕೆದಾರರ ವೇದಿಕೆ
ಉಡುಪಿ, ನ.20: ಕಂಪೆನಿಗಳ ಗೃಹೋಪಯೋಗಿ ಸೇರಿದಂತೆ ವಿವಿಧ ವಸ್ತುಗಳ ಖರೀದಿಯಲ್ಲಿ ಗ್ರಾಹಕರು ಮೋಸಕ್ಕೆ ಒಳಗಾಗು ತ್ತಿದ್ದು, ಈ ಸಂಬಂಧ ಉಡುಪಿ ಜಿಲ್ಲೆಯಲ್ಲಿ ಪ್ರತಿ ತಿಂಗಳು ಉಡುಪಿ ಬಳಕೆದಾರರ ವೇದಿಕೆಗೆ ಸರಾಸರಿ 10-12 ದೂರುಗಳು ಬರುತ್ತಿವೆ. ಇದರಲ್ಲಿ ಶೇ.95ರಷ್ಟು ಪ್ರಕರಣಗಳಲ್ಲಿ ನ್ಯಾಯ ದೊರೆತಿದ್ದು, ಶೇ.5ರಷ್ಟು ಪ್ರಕರಣಗಳು ಗ್ರಾಹಕರ ತಪ್ಪಿನಿಂದಾಗಿ ಬಿದ್ದು ಹೋಗಿವೆ ಎಂದು ವೇದಿಕೆ ಸಂಚಾಲಕ ಎ.ಪಿ.ಕೊಡಂಚ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕುಂದಾಪುರದ ರಾಮಚಂದ್ರ ಶೇರ್ವೆಗಾರರು ರಾಷ್ಟ್ರೀಕೃತ ಬ್ಯಾಂಕ್‌ವೊಂದರಲ್ಲಿ ಸಾಲ ಪಡೆದು ಟ್ರಕ್ ಖರೀದಿ ಮಾಡಿದ್ದು, 2 ವರ್ಷದ ಬಳಿಕ ಈ ಟ್ರಕ್ ಮೂಲದಾಖಲೆ ಸಮೇತ ಕಳವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದರ ಪೂರ್ತಿ ಹಣ ಮಂಜೂರು ಮಾಡುವಂತೆ ವರದಿ ನೀಡಿದ್ದರೂ ವಿಮಾ ಕ್ಲೈಮ್ ತಿರಸ್ಕೃರಿಸಲಾಗಿತ್ತು. ಈ ಬಗ್ಗೆ ಬಳಕೆದಾರರ ವೇದಿಕೆ ಹೋರಾಟ ನಡೆಸಿ ರಾಮಚಂದ್ರ ಅವರಿಗೆ ನ್ಯಾಯ ಒದಗಿಸಿ ಕೊಟ್ಟಿದೆ ಎಂದರು.
ಅದೇ ರೀತಿ ಮೊಬೈಲ್ ಖರೀದಿಯ ವೇಳೆ ಠೇವಣಿ ಪಡೆದುಕೊಂಡಿದ್ದರೂ ಹಿಂತಿರುಗಿಸದ ಜೀಯೋ ಕಂಪೆನಿ ವಿರುದ್ಧ ಮತ್ತು ದೂರಾವಣಿ ಠೇವಣಿಯನ್ನು ವಾಪಾಸ್ಸು ನೀಡದ ಬಿಎಸ್‌ಎನ್‌ಎಲ್ ಕಂಪೆನಿಯ ವಿರುದ್ಧವೂ ವೇದಿಕೆಯು ಕಾನೂನು ಹೋರಾಟ ನಡೆಸುತ್ತಿದೆ ಎಂದು ಅವರು ಹೇಳಿದರು.
ಬಳಕೆದಾರರ ವೇದಿಕೆ ಟ್ರಸ್ಟಿಗಳಾದ ಐ.ಕೆ.ಜಯಚಂದ್ರ ರಾವ್, ಉದ್ಯಾವರ ವಾದಿರಾಜ ಆಚಾರ್ಯ, ಕೆ.ನಾರಾಯಣ, ಸ್ವಾತಿ ಉಪಸ್ಥಿತರಿದ್ದರು.





