ಟಿ.ನರಸೀಪುರ: ಹಂಸಲೇಖ ಹೇಳಿಕೆ ಬೆಂಬಲಿಸಿ ಲಿವರ್ ಫ್ರೈ ಸೇವಿಸಿದ ದಸಂಸ ಕಾರ್ಯಕರ್ತರು

ಮೈಸೂರು: ಸಂಗೀತ ನಿದೇರ್ಶಕ ಹಂಸಲೇಖ ಅವರ ಹೇಳಿಕೆಯನ್ನು ಬೆಂಬಲಿಸಿ ದಲಿತ ಸಂಘರ್ಷಸಮಿತಿ ಕಾರ್ಯಕರ್ತರು ಟಿ.ನರಸೀಪುರ ತಾಲ್ಲೂಕು ಕಚೇರಿ ಮುಂಭಾಗ ಲಿವರ್, ಲಾಖಿ ಫ್ರೈಯನ್ನು ತಯಾರಿಸಿ ಊಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಟಿ.ನರಸೀಪುರ ತಾಲೂಕು ಕಛೇರಿ ಮುಂಭಾಗ ಶನಿವಾರ ಲಿವರ್ ಮತ್ತು ಲಾಖಿ ಖಾದ್ಯ ತಯಾರಿಸಿ ಸೇವಿಸಿ ಹಂಸಲೇಖ ಪರ ಘೋಷಣೆ ಕೂಗಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಧಿಕ್ಕಾರ ಕೂಗಿದರು.
ಇದೇ ವೇಳೆ ದಸಂಸ ಜಿಲ್ಲಾ ಸಂಚಾಲಕ ಉಮಾಮಹದೇವ್ ಮಾತನಾಡಿ, ಖ್ಯಾತ ಸಂಗೀತ ನಿರ್ದೇಶಕ ಡಾಕ್ಟರ್ ಹಂಸಲೇಖ ಅವರ ಪ್ರಗತಿಪರ ಹೇಳಿಕೆಯನ್ನೇ ಹಿಂದೂ ಧರ್ಮಕ್ಕೆ ಎಸಗಿದ ದ್ರೋಹವೆಂಬಂತೆ ಬಿಂಬಿಸುತ್ತಾ ಅಸ್ಪೃಶ್ಯತೆ ಆಚರಣೆಯನ್ನು ಮತ್ತು ವರ್ಣಾಶ್ರಮ ಪದ್ಧತಿಯನ್ನು ಜೀವಂತಾಗಿಡಲು ಮನುವಾದಿಗಳು ಮಾಡುತ್ತಿರುವ ದಬ್ಬಾಳಿಕೆಯನ್ನು ಖಂಡಿಸುವುದಾಗಿ ಹೇಳಿದರು.
ಶಾಸಕ ಪ್ರಭಾವಿ ದಲಿತ ನಾಯಕ ಪ್ರಿಯಾಂಕಾ ಖರ್ಗೆಯವರನ್ನು ವಯಕ್ತಿಕವಾಗಿ ತೇಜೋವಧೆ ಮಾಡಿರುವ ಮನುವಾದಿಗಳ ಕೈಗೊಂಬೆ ಸಂಸದ ಪ್ರತಾಪ್ ಸಿಂಹನ ವಿರುದ್ಧ ಕ್ರಮ ಕೈಗೊಂಡು ಆತನ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಬೇಕು, ಮಹಿಷ ದಸರಾ ಆಚರಣೆ ಸಂದರ್ಭದಲ್ಲೂ ಈತ ದಲಿತರ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾನೆ. ಅಲ್ಪಸಂಖ್ಯಾತರ ಆಹಾರದ ಬಗ್ಗೆಯೂ ಮಾತನಾಡಿ ಕೋಮು ಸಂಘರ್ಷ ಉಂಟುಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದಾನೆ.ಹಾಗಾಗಿ ಕೂಡಲೇ ಸಂಸದ ಪ್ರತಾಪ್ ಸಿಂಹನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಇತಿಹಾಸ ತಿಳಿಸಿದಂತೆ ಒಂದು ಕಾಲದಲ್ಲಿ ಭ್ರಾಹ್ಮಣರ ಪವಿತ್ರ ಆಹಾರವಾಗಿದ್ದ ಮತ್ತು ದಲಿತರ ಆಹಾರವಾಗಿದ್ದ ಗೋಮಾಂಸವನ್ನ ನಮ್ಮಿಂದ ಕಸಿದುಕೊಂಡಿರುವ ಮನುವಾದಿಗಳು ಈಗಲು ಸುಮ್ಮನಿದ್ದರೆ ಶೇಕಡಾ 90% ಜನರ ಆಹಾರವನ್ನು ಕಿತ್ತುಕೊಳ್ಳಲಿದ್ದಾರೆ ಮತ್ತೆ 35% ಜನರಿರುವ ದಲಿತರಿಗೆ ಮುಖ್ಯಮಂತ್ರಿ ಮಾಡದ ಸರ್ಕಾರಗಳು ಇಂದು ನಮ್ಮ ಪರವಾಗಿ ಅತ್ಯಂತ ಸಮರ್ಥ ನಾಯಕರಾದ ಪ್ರಿಯಾಂಕಾ ಖರ್ಗೆಯಂತವರ ಧ್ವನಿಯನ್ನು ಅಡಗಿಸಲು ಪ್ರಯತ್ನ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಎಡದೊರೆ ಸಿದ್ದರಾಜು, ಮಲ್ಲೇಶ್ ಚಂದಹಳ್ಳಿ, ಕುಮಾರಸ್ವಾಮಿ ಪರಿಣಾಮಿಪುರ, ಪುಟ್ಟರಾಜು ಕೋಳಮಲ್ಲನಹುಂಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.







