ನ. 21: ಕಸಾಪ ಚುನಾವಣೆ; ಉಡುಪಿ ಜಿಲ್ಲೆಯಲ್ಲಿ 1987 ಮತದಾರರು
ಉಡುಪಿ, ನ. 20: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕಾಗಿ ರವಿವಾರ ಚುನಾವಣೆ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 1987 ಮಂದಿ ಮತದಾರರಿದ್ದು, ಇವರು ತಲಾ ಎರಡರಂತೆ ಮತ ಚಲಾಯಿಸುವ ಅವಕಾಶ ಪಡೆದಿದ್ದಾರೆ. ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಮೂವರು ಸ್ಪರ್ಧಾ ಕಣದಲ್ಲಿದ್ದಾರೆ.
ಜಿಲ್ಲೆಯಲ್ಲಿ ಏಳು ತಾಲೂಕು ಕೇಂದ್ರ ಹಾಗೂ ಕೋಟ ಹೋಬಳಿಗೆ ಸಂಬಂಧಿಸಿದಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸೇರಿದಂತೆ ಒಟ್ಟು ಎಂಟು ಮತಗಟ್ಟೆಗಳಿವೆ. ಇವುಗಳಲ್ಲಿ ಇರುವ ಮತಗಳ ಸಂಖ್ಯೆ ಹೀಗಿದೆ. ಹೆಬ್ರಿ-135, ಬೈಂದೂರು-254, ಉಡುಪಿ-451, ಬ್ರಹ್ಮಾವರ-140, ಸಾಲಿಗ್ರಾಮ ಪಟ್ಟಣ ಪಂಚಾಯತ್-302, ಕುಂದಾಪುರ-435, ಕಾರ್ಕಳ-134, ಕಾಪು-136. ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ. ಮತದಾನ ಮುಗಿದ ಬಳಿಕ ಮತಗಳ ಎಣಿಕೆಯೂ ನಡೆಯಲಿದೆ.
ಸಾಹಿತ್ಯ ಪರಿಷತ್ ನೀಡುವ ಗುರುತಿನ ಚೀಟಿ ಇಲ್ಲದಿದ್ದರೆ ಸಾರ್ವತ್ರಿಕ ಚುನಾವಣೆಗೆ ಬಳಸುವ ಯಾವುದಾದರೂ ಗುರುತಿನ ಚೀಟಿಯನ್ನು ಬಳಸಿ ಮತದಾನ ಮಾಡಬಹುದು. ಉಡುಪಿಯ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರು ಚುನಾವಣಾಧಿಕಾರಿಯಾಗಿರುವರು.
ಕನ್ನಡ ಭವನಕ್ಕೆ ಅಡಿಗ ಆದ್ಯತೆ: 2012ರಿಂದ ಸತತ ಎರಡು ಬಾರಿ ಜಿಲ್ಲಾಧ್ಯಕ್ಷ ರಾಗಿ ಆಯ್ಕೆಯಾಗಿರುವ ನೀಲಾವರ ಸುರೇಂದ್ರ ಅಡಿಗ ಇದೀಗ ಕನ್ನಡಾಭಿಮಾನಿಗಳ ಹಾಗೂ ಹಿತೈಷಿಗಳ ಒತ್ತಾಯದ ಮೇರೆಗೆ ಮೂರನೇ ಹಾಗೂ ಕೊನೆಯ ಬಾರಿಗೆ ಸ್ಪರ್ಧಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ನೀಲನಕ್ಷೆ ಸಿದ್ಧ ವಾಗಿರುವ ಸರಕಾರ ನಾಯರ್‌ಕೆರೆಯಲ್ಲಿ ನೀಡಿರುವ 11.5 ಸೆಂಟ್ಸ್ ಜಾಗದಲ್ಲಿ ಮೂರು ಕೋಟಿ ರೂ.ಅಂದಾಜು ವೆಚ್ಚದಲ್ಲಿ ಕನ್ನಡ ಭವನ ನಿರ್ಮಿಸುವುದು ತಮ್ಮ ಈ ಬಾರಿಯ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
ಈ ಬಾರಿಯ ಮೂರು ವರ್ಷಗಳ ಅವಧಿಯಲ್ಲಿ ಪುಸ್ತಕ ಸಂತೆ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಕುಂದಾಪ್ರ ಕನ್ನಡ ಬೆಳವಣಿಗೆಗೆ ಉತ್ತೇಜನ, ಮಹಿಳಾ ಕಸಾಪ ಘಟಕ ಸ್ಥಾಪನೆ, ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಕಸಾಪ ಘಟಕ ಸ್ಥಾಪನೆ, ಕಸಾಪ ಯುಟ್ಯೂಬ್ ಚಾಲನೆ ಆರಂಭ, ಯುವ ಬರಹಗಾರರಿಗೆ ವಿಶೇಷ ಕಾರ್ಯಕ್ರಮಗಳ ಆಯೋಜನೆಗೆ ಪ್ರಾಶಸ್ತ್ಯ ನೀಡುವುದಾಗಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಸಾಪ ಪ್ರಮುಖರಾದ ದೇವದಾಸ ಹೆಬ್ಬಾರ್, ಪುಂಡಲೀಕ ಮರಾಠೆ, ನರಸಿಂಹಮೂರ್ತಿ ರಾವ್, ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಸೂರಾಲು ನಾರಾಯಣ ಮಡಿ ಮುಂತಾದವರು ಉಪಸ್ಥಿತರಿದ್ದಾರೆ.







