ಉಪ್ಪಿನಂಗಡಿ; ಮಗುವಿಗೆ ಜನ್ಮ ನೀಡಿದ ಬಾಲಕಿ: ಪೊಕ್ಸೊ ಪ್ರಕರಣದಡಿ ಓರ್ವ ಸೆರೆ

ಉಪ್ಪಿನಂಗಡಿ : ಅಪ್ರಾಪ್ತ ವಿದ್ಯಾರ್ಥಿನಿಯೋರ್ವಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಈಗಾಗಲೇ ಪೊಕ್ಸೊ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದು, ಈ ಪ್ರಕರಣದಲ್ಲಿ ಮತ್ತೋರ್ವ ಆರೋಪಿ ಇದ್ದಾನೆ ಎಂಬ ದೂರಿನ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಹತ್ತನೇ ತರಗತಿ ವಿದ್ಯಾರ್ಥಿನಿಯೋರ್ವಳ ಉದರದಲ್ಲಿ ಗೆಡ್ಡೆ ಬೆಳೆದಿದೆ ಎಂದು ಹೆತ್ತವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಆಕೆ ತುಂಬು ಗರ್ಭವತಿಯಾಗಿರುವುದು ಬೆಳಕಿಗೆ ಬಂದಿತ್ತು. ಆಕೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಗುರುವಾರ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅಲ್ಲಿನ ವೈದ್ಯಾಧಿಕಾರಿಗಳು ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರ ಗಮನಕ್ಕೆ ತಂದಿದ್ದರು.
ಈ ಬಗ್ಗೆ ಪೊಲೀಸರಿಗೆ ವಿದ್ಯಾರ್ಥಿನಿ ನೀಡಿದ ಮಾಹಿತಿಯಂತೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಈ ಪ್ರಕರಣದ ಆರೋಪಿಗಳಲ್ಲಿ ಓರ್ವನಾದ ಹಿರೇಬಂಡಾಡಿ ಗ್ರಾಮದ ಮದ್ಮೆತ್ತಿಮಾರು ನಿವಾಸಿ ಅಟೋ ಚಾಲಕ ಕೇಶವ (34) ಎಂಬಾತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಪ್ರಕರಣದ ಇನ್ನೋರ್ವ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈತ ಈ ವಿದ್ಯಾರ್ಥಿನಿಯ ಸಂಬಂಧಿಕ ಎಂದು ತಿಳಿದುಬಂದಿದೆ.







