ಇನ್ಸ್ಟಾಗ್ರಾಂನಲ್ಲಿ ʼದೇಶದ್ರೋಹದʼ ಪೋಸ್ಟ್: ನಟಿ ಕಂಗನಾ ರಣಾವತ್ ವಿರುದ್ಧ ಪ್ರಕರಣ ದಾಖಲಿಸಿದ ಯುವ ಕಾಂಗ್ರೆಸ್

ಹೊಸದಿಲ್ಲಿ, ನ. 20: ಸಾಮಾಜಿಕ ಮಾಧ್ಯಮದಲ್ಲಿ ನೀಡಿದ ದೇಶದ್ರೋಹದ ಹೇಳಿಕೆ ಆರೋಪದ ಹಿನ್ನೆಲೆಯಲ್ಲಿ ನಟಿ ಕಂಗನಾ ರಣಾವತ್ ಅವರ ವಿರುದ್ಧ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಶನಿವಾರ ಪೊಲೀಸ್ ದೂರು ದಾಖಲಿಸಿದೆ.
ಭಾರತೀಯ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಕಾರ್ಯದರ್ಶಿ ಅಮರೀಶ್ ರಂಜನ್ ಪಾಂಡೆ ಹಾಗೂ ಸಹ-ಸಮನ್ವಯಕ ಅಂಬುಜ್ ದೀಕ್ಷಿತ್ ಅವರು ಹೊಸದಿಲ್ಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ನಡುವೆ ದಿಲ್ಲಿ ಸಿಕ್ಖ್ ಗುರುದ್ವಾರ ನಿರ್ವಹಣಾ ಸಮಿತಿ (ಡಿಎಸ್ಜಿಎಂಸಿ) ಅಧ್ಯಕ್ಷ ಹಾಗೂ ಶಿರೋಮಣಿ ಅಕಾಲಿ ದಳ (ಎಸ್ಎಡಿ)ದ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ಸಿಕ್ಖರನ್ನು ಗುರಿಯಾಗಿರಿಸಿ ಅವಮಾನಕರ ಹೇಳಿಕೆ ನೀಡಿದ ಕಂಗನಾ ರಣಾವತ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಕಂಗನಾ ರಣಾವತ್ ಅವರ ವಿರುದ್ಧ ಸರಕಾರ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ‘‘ಅವರನ್ನು ಮಾನಸಿಕ ಆಸ್ಪತ್ರೆಗೆ , ಇಲ್ಲವೇ ಜೈಲಿಗೆ ಹಾಕಬೇಕು. ಇನ್ಸ್ಟಾಗ್ರಾಂನಲ್ಲಿ ಅವರ ದ್ವೇಷಪೂರಿತ ಅಂಶಗಳ ಪೋಸ್ಟ್ ಕುರಿತಂತೆ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ’’ ಎಂದು ಸಿರ್ಸಾ ಟ್ವೀಟ್ ಮಾಡಿದ್ದಾರೆ.