ಕನಿಷ್ಠ ಬೆಂಬಲ ಬೆಲೆ ಕುರಿತ ಮಾತುಕತೆ: ಕೇಂದ್ರಕ್ಕೆ ರೈತರ ಪತ್ರ ?

ಫೈಲ್ ಫೋಟೊ (PTI)
ಹೊಸದಿಲ್ಲಿ: ರೈತರು ಬೆಳೆದ ಎಲ್ಲ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವ ಬಗ್ಗೆ ಕಾನೂನಾತ್ಮಕ ಖಾತರಿ ನೀಡುವುದು ಸೇರಿದಂತೆ ಬಾಕಿ ಇರುವ ಬೇಡಿಕೆಗಳ ಬಗ್ಗೆ ಮಾತುಕತೆ ಮುಂದುವರಿಸುವಂತೆ ಕೋರಿ ಸಂಯುಕ್ತ ಕಿಸಾನ್ ಮೋರ್ಚಾ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಸಾಧ್ಯತೆ ಇದೆ. ನಿಗದಿಯಂತೆ ಈ ತಿಂಗಳ 29ರಿಂದ ಪ್ರತಿದಿನ ಸಂಸತ್ತಿಗೆ ಟ್ರ್ಯಾಕ್ಟರ್ ಜಾಥಾ ನಡೆಸಲು ಕೂಡಾ ಎಸ್ಕೆಎಂ ನಿರ್ಧರಿಸಿದೆ.
"ಮಾತುಕತೆ ಪುನರಾರಂಭಕ್ಕೆ ಸಂಬಂಧಿಸಿ ಕೇಂದ್ರಕ್ಕೆ ಪತ್ರ ಬರೆಯುವ ಬಗ್ಗೆ ನಾವು ಚರ್ಚಿಸಿದ್ದೇವೆ. ರೈತ ಸಂಘಟನೆಗಳ ಸಮನ್ವಯ ಸಮಿತಿಯಲ್ಲಿ ಈ ಬಗ್ಗೆ ಬಹುತೇಕ ಒಮ್ಮತಾಭಿಪ್ರಾಯವಿದ್ದು, ಬಾಕಿ ಇರುವ ಬೇಡಿಕೆಗಳ ಬಗ್ಗೆ ಒತ್ತಡ ತರಲಿದ್ದೇವೆ" ಎಂದು ಸಭೆಯ ಬಳಿಕ ರೈತ ಮುಖಂಡರೊಬ್ಬರು ಹೇಳಿದರು.
ಆದರೆ ಈ ಬಗ್ಗೆ ಅಂತಿಮ ನಿರ್ಧಾರವನ್ನು ರವಿವಾರ ನಡೆಯುವ ಎಲ್ಲ ರೈತ ಸಂಘಟನೆಗಳ ವಿಸ್ತತ ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಇದನ್ನು ಎಸ್ಕೆಎಂ ಸೂಕ್ತ ಸಮಯದಲ್ಲಿ ಅಂದರೆ ಬಹುಶಃ ರವಿವಾರ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆ ಇದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಘೋಷಿಸಿದಂತೆ ಹೊಸ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವವರೆಗೆ ಟ್ರ್ಯಾಕ್ಟರ್ ಜಾಥಾ ನಡೆಯಲಿದೆ. ಮೋದಿ ಈಗಾಗಲೇ ವಿವಾದಾತ್ಮಕ ಕಾಯ್ದೆ ವಾಪಾಸು ಪಡೆಯುವ ನಿರ್ಧಾರ ಪ್ರಕಟಿಸಿದ್ದು, ಎಂಎಸ್ಪಿ ಬಗೆಗಿನ ಸಮಸ್ಯೆ ಬಗ್ಗೆ ಚರ್ಚಿಸಲು ಸಮಿತಿ ನೇಮಿಸುವುದಾಗಿ ಘೋಷಿಸಿದ ಬಳಿಕವೂ ಮಾತುಕತೆ ಮುಂದುವರಿಸುವ ಅಗತ್ಯತೆ ಬಗ್ಗೆ ಪ್ರಶ್ನಿಸಿದಾಗ, ರೈತ ಸಂಘಟನೆಗಳ ಪ್ರಾತಿನಿಧ್ಯ ಇಲ್ಲದ ಇಂಥ ಸಮಿತಿಗಳು ಅರ್ಥಹೀನ. ಈ ಕಾರಣದಿಂದ ಎಸ್ಕೆಎಂ ಸರ್ಕಾರದ ಜತೆ ಮಾತುಕತೆಗೆ ಮುಂದಾಗಿದೆ ಎಂದು ಮತ್ತೊಬ್ಬ ರೈತ ಮುಖಂಡ ಸ್ಪಷ್ಟಪಡಿಸಿದರು.