ಮಮತಾ ಬ್ಯಾನರ್ಜಿ ಶೀಘ್ರವೇ ದಿಲ್ಲಿಗೆ: ಸಂಸತ್ತಿನ ಕಾರ್ಯತಂತ್ರಕ್ಕಾಗಿ ವಿರೋಧ ಪಕ್ಷಗಳ ಭೇಟಿ

ಹೊಸದಿಲ್ಲಿ: ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನವೆಂಬರ್ 22 ಹಾಗೂ 25 ರ ನಡುವೆ ದಿಲ್ಲಿಗೆ ಭೇಟಿ ನೀಡಲಿದ್ದು, ನವೆಂಬರ್ 29 ರಂದು ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮೊದಲು ವಿಪಕ್ಷಗಳನ್ನು ಭೇಟಿಯಾಗಿ ಬಿಜೆಪಿಯನ್ನು ಎದುರಿಸಲು ಕಾರ್ಯತಂತ್ರ ದ ಕುರಿತು ಮಾತನಾಡಲಿದ್ದಾರೆ ಎಂದು NDTV ವರದಿ ಮಾಡಿದೆ.
ಮೂರು ಕೃಷಿ ಕಾನೂನುಗಳನ್ನು ಸಂಸತ್ತಿನಲ್ಲಿ ಗದ್ದಲದ ನಡುವೆ ಕಳೆದ ವರ್ಷ ಅಂಗೀಕರಿಸಲ್ಪಟ್ಟವು. ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಹೇಳುವವರೆಗೂ ರೈತರಿಂದ 15 ತಿಂಗಳ ಉಗ್ರ ಪ್ರತಿಭಟನೆಗೆ ಇದು ಕಾರಣವಾಯಿತು.
ಈ ಅಧಿವೇಶನದಲ್ಲಿ ಕಾನೂನುಗಳನ್ನು ರದ್ದುಗೊಳಿಸುವ ಔಪಚಾರಿಕ ಪ್ರಕ್ರಿಯೆ ನಿರೀಕ್ಷಿಸಲಾಗಿದೆ. ಕೃಷಿ ಕಾಯ್ದೆ ರದ್ದುಪಡಿಸಿರುವ ವಿಚಾರವೇ ಅಧಿವೇಶನದಲ್ಲಿ ಚರ್ಚೆಯ ಕೇಂದ್ರಬಿಂದುವಾಗುವ ನಿರೀಕ್ಷೆ ಇದೆ.
ಬ್ಯಾನರ್ಜಿ ಅವರು "ಪ್ರತಿಯೊಬ್ಬ ರೈತರಿಗೆ ಹೃತ್ಪೂರ್ವಕ ಅಭಿನಂದನೆಗಳು" ಎಂದು ಟ್ವೀಟ್ ಮಾಡಿದ್ದಾರೆ. ಮೃತ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಿದರು ಹಾಗೂ ಪ್ರತಿಭಟನಾಕಾರರೊಂದಿಗೆ "ಕ್ರೌರ್ಯ" ತೋರಿದ್ದಕ್ಕಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿಯವರನ್ನೂ ಭೇಟಿ ಮಾಡಬಹುದು ಎಂದು ಸುದ್ದಿ ಸಂಸ್ಥೆ ಪಿಟಿಐ ಈ ವಾರ ತಿಳಿಸಿದೆ. ಬಿಎಸ್‌ಎಫ್ ಅಧಿಕಾರ ವ್ಯಾಪ್ತಿ ವಿಸ್ತರಣೆಯಂತಹ ಕೇಂದ್ರ ಸರಕಾರದ ವಿವಾದಾತ್ಮಕ ವಿಷಯಗಳ ಕುರಿತು ಇಬ್ಬರೂ ಚರ್ಚಿಸುವ ನಿರೀಕ್ಷೆಯಿದೆ.







