ಕೃಷಿ ಕಾನೂನು ಹಿಂಪಡೆಯುವವರೆಗೆ, ಬೆಲೆ ಖಾತ್ರಿಪಡಿಸುವವರೆಗೆ ಪ್ರತಿಭಟನೆ ನಡೆಸಲಾಗುವುದು: ರೈತರು

ಹೊಸದಿಲ್ಲಿ: ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಔಪಚಾರಿಕವಾಗಿ ರದ್ದುಗೊಳಿಸುವವರೆಗೆ ತಮ್ಮ ಪ್ರತಿಭಟನೆಗಳು ಮುಂದುವರಿಯಲಿವೆ ಎಂದು ದಿಲ್ಲಿ ಗಡಿಯಲ್ಲಿನ ರೈತರು ಹೇಳಿದ್ದಾರೆ. ಕೃಷಿ ಕಾನೂನುಗಳನ್ನು ರದ್ದುಪಡಿಸಲಾಗುವುದು ಎಂದು ಶುಕ್ರವಾರ ಪ್ರಧಾನಿ ಮೋದಿ ಘೋಷಿಸಿದ್ದರು.
ಕನಿಷ್ಠ ಬೆಂಬಲ ಬೆಲೆಗಳಿಗೆ ಕಾನೂನು ಹಾಗೂ ಕಳೆದ ವರ್ಷ ಹಲವು ರೈತರ ವಿರುದ್ಧ ದಾಖಲಾಗಿರುವ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ತಿಂಗಳಾಂತ್ಯದಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾದ ಬಳಿಕವಷ್ಟೇ ಕೃಷಿ ಕಾನೂನುಗಳ ಅಧಿಕೃತ ಹಿಂಪಡೆಯುವಿಕೆ ನಡೆಯಬಹುದು.
"ನಾವು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ಚರ್ಚಿಸಿದ್ದೇವೆ. ಇದರ ನಂತರ, ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಎಸ್‌ಕೆಎಂನ (ಸಂಯುಕ್ತ ಕಿಸಾನ್ ಮೋರ್ಚಾ) ಪೂರ್ವನಿರ್ಧರಿತ ಕಾರ್ಯಕ್ರಮಗಳು ಹಾಗೆಯೇ ಮುಂದುವರಿಯುತ್ತವೆ" ಎಂದು ದಿಲ್ಲಿ-ಹರಿಯಾಣ ಗಡಿಯ ಸಿಂಘುವಿನಲ್ಲಿ ಬಲ್ಬೀರ್ ಸಿಂಗ್ ರಾಜೇವಾಲ್ ಹೇಳಿದರು.
ಕಾರ್ಯಕ್ರಮಗಳಲ್ಲಿ ನವೆಂಬರ್ 22 ರಂದು ಲಕ್ನೋದಲ್ಲಿ ರೈತರ ಸಭೆ, ನವೆಂಬರ್ 26 ರಂದು ಎಲ್ಲಾ ಗಡಿಗಳಲ್ಲಿ ಸಭೆಗಳು ಮತ್ತು ನವೆಂಬರ್ 29 ರಂದು ಸಂಸತ್ತಿಗೆ ಮೆರವಣಿಗೆ ಸೇರಿವೆ ಎಂದು ಅವರು ಹೇಳಿದರು.
ತಮ್ಮ ಬೇಡಿಕೆಗಳನ್ನು ಪಟ್ಟಿ ಮಾಡಿ ಪ್ರಧಾನಿಗೆ ಬಹಿರಂಗ ಪತ್ರ ಬರೆಯುವುದಾಗಿ ರೈತರು ತಿಳಿಸಿದ್ದಾರೆ.







