ಉತ್ತರಪ್ರದೇಶ ಚುನಾವಣೆಯ ನಂತರ ಕೃಷಿ ಕಾನೂನುಗಳು ಮತ್ತೊಮ್ಮೆ ಜಾರಿಗೆ ಬರಲಿದೆ: ಅಖಿಲೇಶ್ ಯಾದವ್ ಎಚ್ಚರಿಕೆ

ಲಕ್ನೊ: ರಾಜಸ್ಥಾನದ ರಾಜ್ಯಪಾಲ ಕಲ್ರಾಜ್ ಮಿಶ್ರಾ ಹಾಗೂ ಉನ್ನಾವ್‌ನ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿ ಸಮಾಜವಾದಿ ಪಕ್ಷವು 2022 ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ನಂತರ ಮತ್ತೆ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ತರಬಹುದು ಎಂದು ಎಚ್ಚರಿಕೆ ನೀಡಿದೆ.
ಅಗತ್ಯವಿದ್ದರೆ ಮತ್ತೆ ಕಾನೂನು ತರಬಹುದು ಎಂದು ಮಿಶ್ರಾ ಹಾಗೂ ಮಹಾರಾಜ್ ಇಬ್ಬರೂ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಪಂಜಾಬ್, ಹರ್ಯಾಣ ಹಾಗೂ ಉತ್ತರ ಪ್ರದೇಶದ ರೈತರ ಒಂದು ವಿಭಾಗವು ಸುಮಾರು ಒಂದು ವರ್ಷದ ಆಂದೋಲನದ ನಂತರ ಕೇಂದ್ರವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
ಕೇಂದ್ರವು ಸಂಸತ್ತಿನಲ್ಲಿ ಈ ಕಾನೂನುಗಳನ್ನು ಔಪಚಾರಿಕವಾಗಿ ರದ್ದುಪಡಿಸುವವರೆಗೆ ಪ್ರತಿಭಟನಾಕಾರರು ದಿಲ್ಲಿಯ ಗಡಿ ಪ್ರದೇಶಗಳಲ್ಲಿರುತ್ತಾರೆ ಎಂದು ರೈತ ಮುಖಂಡರು ಹೇಳಿದ್ದಾರೆ. ಎಂಎಸ್‌ಪಿ ಖಾತರಿಗಾಗಿ ಹಾಗೂ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಲು ತಮ್ಮ ಹೋರಾಟವನ್ನು ಮುಂದುವರೆಸುತ್ತಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ಸಮಾಜವಾದಿ ಪಕ್ಷ "ಅವರ ಹೃದಯ ಶುದ್ಧವಾಗಿಲ್ಲ ಎಂಬುದು ಸಂಪೂರ್ಣವಾಗಿ ಸ್ಪಷ್ಟವಾಗಿದೆ ಹಾಗೂ ಚುನಾವಣೆಯ ನಂತರ ಮತ್ತೆ ಕೃಷಿ ಮಸೂದೆಗಳನ್ನು ತರಲಾಗುವುದು. ಸಾಂವಿಧಾನಿಕ ಹುದ್ದೆಗಳನ್ನು ಆಕ್ರಮಿಸಿಕೊಂಡಿರುವ ರಾಜಸ್ಥಾನದ ರಾಜ್ಯಪಾಲ ಕಲ್ರಾಜ್ ಮಿಶ್ರಾ ಹಾಗೂ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಬಿಜೆಪಿ ಸರಕಾರವು ಕೃಷಿ ಕಾನೂನುಗಳಿಗೆ ಮಸೂದೆಯನ್ನು ತರಬಹುದು ಎಂದು ಹೇಳಿದ್ದಾರೆ. ರೈತರಿಗೆ ಸುಳ್ಳು ಕ್ಷಮೆ ಕೇಳುವವರ ಸತ್ಯ ಇದು. 2022 ರಲ್ಲಿ ರೈತರು ಬದಲಾವಣೆ ತರುತ್ತಾರೆ" ಎಂದು ಸಮಾಜವಾದಿ ಪಕ್ಷ ಟ್ವೀಟ್‌ನಲ್ಲಿ ತಿಳಿಸಿದೆ.