`ಆದಾಯ ಮಿತಿ ಮೊದಲು ಸಡಿಲಿಸಿದ ಮಹಾನುಭಾವ ಯಾರು?': ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

ಬೆಂಗಳೂರು, ನ. 21: `ಸಿದ್ದರಾಮಯ್ಯನವರೇ, ನಾನು ದೇವರಾಜ ಅರಸು ಮಾರ್ಗದಲ್ಲಿ ನಡೆಯುವವನು ಎಂಬ ಆತ್ಮವಂಚನೆಯ ಮಾತುಗಳನ್ನು ಇನ್ನಾದರೂ ನಿಲ್ಲಿಸಿ. ಕೃಷಿ ಭೂಮಿ ಖರೀದಿಗಿದ್ದ ಆದಾಯ ಮಿತಿಯನ್ನು ಮೊದಲು ಸಡಿಲಿಸಿದ ಮಹಾನುಭಾವ ಯಾರು? ಭೂಗಳ್ಳರಿಗೆ ಅನುಕೂಲವಾಗಲಿ ಎಂದು ಆದಾಯ ಮಿತಿ ಸಡಿಲಿಸಿದ್ದೇ?' ಎಂದು ಬಿಜೆಪಿ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, `ದೇವರಾಜ ಅರಸು ಜನ್ಮ ಶತಮಾನೋತ್ಸವ ವರ್ಷದಲ್ಲಿ ಕೃಷಿ ಭೂಮಿ ಖರೀದಿಯ ಆದಾಯದ ಮಿತಿಯನ್ನು ಸಡಿಲಗೊಳಿಸಿತ್ತು. ಆದರೆ, ಕೃಷಿ ಭೂಮಿ ಖರೀದಿಯ ಮಿತಿಯನ್ನು 2 ಲಕ್ಷ ರೂ.ಗಳಿಂದ 25 ಲಕ್ಷ ರೂ.ಗಳಿಗೆ ಏರಿಸುವ ನಿರ್ಧಾರ ತೆಗೆದುಕೊಂಡಿದ್ದು ಸಿದ್ದರಾಮಯ್ಯ ಸರಕಾರ. ಆಗ ಸ್ವಪಕ್ಷೀಯರೇ ಇದನ್ನು ವಿರೋಧಿಸಿದ್ದರೂ ಬುರುಡೆರಾಮಯ್ಯ ಟವೆಲ್ ಕೊಡವಿಕೊಂಡು ನಡೆದಿದ್ದರು' ಎಂದು ಟೀಕಿಸಿದೆ.
`ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಭೂ ಸುಧಾರಣಾ ಕಾಯ್ದೆಯನ್ನು ಗಾಳಿಗೆ ತೂರಲಾಗಿತ್ತು. ಕೈಗಾರಿಕಾ ಉದ್ದೇಶಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಟ್ಟು ಉದ್ಯಮಿಗಳು ನೇರವಾಗಿ ಖರೀದಿಸಲು ಅವಕಾಶ ಮಾಡಿಕೊಡಲಾಗಿತ್ತು. ಆಗ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಿದ್ದು ಬುರುಡೆರಾಮಯ್ಯ, ಅಂದರೆ ಸಿದ್ದರಾಮಯ್ಯ ಮಾರ್ಗದರ್ಶನದಲ್ಲೇ ಕಾಯ್ದೆ ಮುರಿದಿದ್ದು ನಿಜವಲ್ಲವೇ?' ಎಂದು ಬಿಜೆಪಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ.
`ರಾಜ್ಯ ಸರಕಾರ ಭೂ ಸುಧಾರಣಾ ವಿಧೇಯಕವನ್ನು ಸದನದಲ್ಲಿ ಮಂಡಿಸಿದಾಗ ಸಭಾತ್ಯಾಗ ಮಾಡಿ ನಿಮ್ಮ ಸದಸ್ಯರ ಜೊತೆ ಎದ್ದು ಹೋಗಿದ್ದೇಕೆ? ಅಂದು ಮೌನಕ್ಕೆ ಜಾರಿದ ನೀವು ಇಂದು ವಿರೋಧಿಸುತ್ತಿರುವುದು ರಾಜಕೀಯ ಕಾರಣಕ್ಕಾಗಿಯಲ್ಲವೇ?'
-ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ







