'ನಮ್ಮ ಪಕ್ಷದಲ್ಲಿ ಇರುವಷ್ಟು ಸದಸ್ಯರು ಚೀನಾದ ಕಮ್ಯೂನಿಸ್ಟ್ ಪಕ್ಷದಲ್ಲೂ ಇಲ್ಲ': ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಮಂಡ್ಯ, ನ.21: ಜಗತ್ತಿನಲ್ಲೇ ಬಿಜೆಪಿ ಅತಿದೊಡ್ಡ ಪಕ್ಷ. ನಮ್ಮ ಪಕ್ಷದಲ್ಲಿ ಇರುವಷ್ಟು ಸದಸ್ಯರು ಚೀನಾದ ಕಮ್ಯೂನಿಸ್ಟ್ ಪಕ್ಷದಲ್ಲೂ ಇಲ್ಲ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಗರದಲ್ಲಿ ರವಿವಾರ ನಡೆದ ಬಿಜೆಪಿ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶ್ವದಲ್ಲೇ ಭಾರತ ತಲೆ ಎತ್ತುವಂತೆ ಮಾಡಿದ್ದಾರೆ. ಸೇನಾ ಶಸ್ತ್ರಾಸ್ತ್ರಗಳನ್ನು ಭಾರತದಲ್ಲೇ ತಯಾರಿಸಲು ಕ್ರಮಕೈಗೊಂಡಿದ್ದಾರೆ ಎಂದರು.
ಮನಮೋಹನ್ ಸಿಂಗ್ ಅವರು ಯಾವುದೇ ದೇಶಕ್ಕೆ ಹೋದರೂ, ಯಾರೊಬ್ಬರೂ ಎದ್ದು ನಿಂತು ಮರ್ಯಾದೆ ನೀಡುತ್ತಿರಲಿಲ್ಲ. ಯಾವುದೋ ಒಂದು ಮೂಲೆಯಲ್ಲಿ ನಿಲ್ಲಬೇಕಿತ್ತು. ಆದರೆ, ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ನಮ್ಮ ಪ್ರಧಾನಿಗೆ ಬೇರೆ ದೇಶಗಳಲ್ಲಿ ಎದ್ದು ನಿಂತು ಮರ್ಯಾದೆ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿರುವ ಮಂಜು ಸಜ್ಜನ ವ್ಯಕ್ತಿಯಾಗಿದ್ದು, ಅವರನ್ನು ಗೆಲ್ಲಿಸುವ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಕರಂದ್ಲಾಜೆ ಕರೆ ನೀಡಿದರು.








