ಮೃತ ರೈತರ ಕುಟುಂಬಗಳಿಗೆ ಪಿಎಂ ಕೇರ್ಸ್ ನಿಧಿಯಿಂದ ಪರಿಹಾರಕ್ಕೆ ಶಿವಸೇನೆ ಆಗ್ರಹ

ಮುಂಬೈ, ನ.21: ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ವರ್ಷವಿಡೀ ನಡೆದ ಪ್ರತಿಭಟನೆ ಸಂದರ್ಭ 700ಕ್ಕೂ ಅಧಿಕ ರೈತರು ಮೃತಪಟ್ಟಿದ್ದು, ಅವರ ಕುಟುಂಬಗಳಿಗೆ ಪಿಎಂ ಕೇರ್ಸ್ ನಿಧಿಯಿಂದ ಆರ್ಥಿಕ ನೆರವನ್ನು ಒದಗಿಸಬೇಕು ಎಂದು ಶಿವಸೇನೆಯ ಸಂಸದ ಸಂಜಯ್ ರಾವತ್ ಅವರು ರವಿವಾರ ಇಲ್ಲಿ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,ದಿಲ್ಲಿ ಸಮೀಪದ ಪ್ರತಿಭಟನಾ ತಾಣಗಳಲ್ಲಿ ಹಲವಾರು ರೈತರು ಮೃತಪಟ್ಟಿದ್ದರೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತರ ಕೆಲವರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಲಖಿಂಪುರ ಖೇರಿಯಲ್ಲಿ ಕೆಲವು ರೈತರ ಮೇಲೆ ವಾಹನ ನುಗ್ಗಿಸಿ ಕೊಲ್ಲಲಾಗಿದೆ. ಸರಕಾರಕ್ಕೆ ಈಗ ತನ್ನ ತಪ್ಪಿನ ಅರಿವಾಗಿದ್ದು,ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಂಡಿದೆ.
ಮೃತ ರೈತರ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸಬೇಕು ಎಂಬ ಒತ್ತಾಯ ದೇಶದ ವಿವಿಧೆಡೆಗಳಿಂದ ಕೇಳಿಬರುತ್ತಿದೆ ಎಂದರು. ಪಿಎಂ ಕೇರ್ಸ್ ನಿಧಿಯಲ್ಲಿ ಲೆಕ್ಕವಿಲ್ಲದಿರುವ ಹಣವಿದೆ ಎಂದು ಆರೋಪಿಸಿದ ಅವರು,ಈ ಹಣವನ್ನು ಮೃತ ರೈತರ ಕುಟುಂಬಗಳಿಗೆ ಪರಿಹಾರವನ್ನು ನೀಡಲು ಬಳಸಬೇಕು ಎಂದರು.
ಕೇವಲ ರೈತರ ಕ್ಷಮೆ ಕೋರಿದರೆ ಸಾಲದು,ಅವರ ಕುಟುಂಬಗಳಿಗೆ ನೆರವಾಗುವುದೂ ಮುಖ್ಯವಾಗಿದೆ ಎಂದು ರಾವತ್ ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು ಪ್ರಸ್ತಾಪಿಸಿ ಹೇಳಿದರು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆಯವರು ಶಸ್ತ್ರಚಿಕಿತ್ಸೆಯ ಬಳಿಕ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.