ಕೃಷಿ ಕಾಯ್ದೆಗಳ ವಾಪಸಾತಿಯನ್ನು ಬುಧವಾರ ಕೇಂದ್ರ ಸಂಪುಟ ಅನುಮೋದಿಸುವ ಸಾಧ್ಯತೆ

ಹೊಸದಿಲ್ಲಿ, ನ.21: ಕೇಂದ್ರ ಸಂಪುಟವು ಬುಧವಾರ ನಡೆಯಲಿರುವ ತನ್ನ ಮುಂದಿನ ಸಭೆಯಲ್ಲಿ ಕೃಷಿ ಕಾಯ್ದೆಗಳ ವಾಪಸಾತಿಯನ್ನು ಅನುಮೋದಿಸಲಿದೆ ಎಂದು ಅನಾಮಿಕ ಸರಕಾರಿ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಸಂಪುಟದ ಅನುಮೋದನೆಯ ಬಳಿಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಪ್ರಸ್ತಾವವನ್ನು ಸಂಸತ್ತು ಕೈಗೆತ್ತಿಕೊಳ್ಳಲಿದೆ.
ನ.29ರಿಂದ ಆರಂಭಗೊಳ್ಳಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಕಟಿಸಿದ್ದರು. ಆದಾಗ್ಯೂ ಕೃಷಿ ಕಾಯ್ದೆಗಳು ಸಂಸತ್ತಿನಲ್ಲಿ ರದ್ದುಗೊಳ್ಳುವವರೆಗೂ ದಿಲ್ಲಿಯ ಗಡಿಗಳಲ್ಲಿ ಪ್ರತಿಭಟನೆಗಳು ಮಂದುವರಿಯಲಿವೆ ಎಂದು ರೈತ ಸಂಘಟನೆಗಳು ಹೇಳಿವೆ. ಸರಕಾರವು ಬೆಳೆಗಳಿಗೆ ಶಾಸನಬದ್ಧ ಕನಿಷ್ಠ ಬೆಂಬಲ ಬೆಲೆ ಖಾತರಿಯನ್ನು ನೀಡಬೇಕು ಮತ್ತು ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂದೆಗೆದುಕೊಳ್ಳಬೇಕು ಎಂದು ಅವು ಪಟ್ಟು ಹಿಡಿದಿವೆ.
Next Story





