ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಸುರೇಂದ್ರ ಅಡಿಗ ಪುನರಾಯ್ಕೆ

ಉಡುಪಿ, ನ.21: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನೀಲಾವರ ಸುರೇಂದ್ರ ಅಡಿಗ ಅವರು ಸತತ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. 2012ರಿಂದ ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷರಾಗಿರುವ ನಿವೃತ್ತ ಅಧ್ಯಾಪಕ ಸುರೇಂದ್ರ ಅಡಿಗ ಅವರು ತನ್ನ ನಿಕಟ ಪ್ರತಿಸ್ಪರ್ಧಿಯನ್ನು 32 ಮತಗಳ ಅಂತರದಿಂದ ಪರಾಭವಗೊಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಒಟ್ಟು 1987 ಕಸಾಪ ಮತದಾರರಿದ್ದು, ಇವರಲ್ಲಿ ಇಂದು ಒಟ್ಟು 1232 ಮಂದಿ ತಮ್ಮ ಮತ ಚಲಾಯಿಸಿದ್ದರು. ಇವುಗಳಲ್ಲಿ ಆರು ಮತಗಳು ತಿರಸ್ಕೃತಗೊಂಡಿದ್ದು, ಉಳಿದ 1226 ಸಿಂಧು ಮತಗಳಲ್ಲಿ ನೀಲಾವರ ಸುರೇಂದ್ರ ಅಡಿಗ 432 ಮತಗಳನ್ನು ಪಡೆದರೆ, ಜಿದ್ದಾಜಿದ್ದಿನ ಹೋರಾಟದಲ್ಲಿ ಅವರ ಎದುರಾಳಿಗಳಾದ ಕೆ.ಎಸ್.ಸುಬ್ರಹ್ಮಣ್ಯ ಬಾಸ್ರಿ 400 ಹಾಗೂ ಬೈಂದೂರಿನ ಸುಬ್ರಹ್ಮಣ್ಯ ಭಟ್ 394 ಮತಗಳನ್ನು ಗಳಿಸಿ ಎರಡು ಮತ್ತು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಸುರೇಂದ್ರ ಅಡಿಗರಿಗೆ ಬಹುಪಾಲು ಮತಗಳು ಬಿದ್ದಿರುವುದು ಅವರ ಕೋಟ ಹೋಬಳಿಯಲ್ಲಿ. ಇಲ್ಲಿರುವ 302 ಮತಗಳಲ್ಲಿ 216 ಮತಗಳು ಚಲಾವಣೆ ಗೊಂಡಿದ್ದು ಇವುಗಳಲ್ಲಿ 117 ಅಡಿಗರಿಗೆ ಹಾಗೂ 74 ಬಾಸ್ರಿಯವರಿಗೆ ಬಿದ್ದಿತ್ತು. ಕುಂದಾಪುರದಲ್ಲಿ ಚಲಾವಣೆಗೊಂಡ 240 ಮತಗಳ್ಲಿ ಅಡಿಗರಿಗೆ 92 ಹಾಗೂ ಸುಬ್ರಹ್ಮಣ್ಯ ಭಟ್‌ರಿಗೆ 96 ಮತಗಳು ಹಂಚಿಕೆಯಾದವು. ಉಡುಪಿಯಲ್ಲಿ ಬಾಸ್ರಿ 137 ಮತಗಳನ್ನು ಪಡೆದರೆ, ಬೈಂದೂರಿನಲ್ಲಿ ಸುಬ್ರಹ್ಮಣ್ಯ ಭಟ್‌ರಿಗೆ 127 ಮತಗಳು ಬಿದ್ದವು.
ಜಿಲ್ಲೆಯಲ್ಲಿ ಏಳು ತಾಲೂಕು ಕೇಂದ್ರ ಹಾಗೂ ಕೋಟ ಹೋಬಳಿಗೆ ಸಂಬಂಧಿಸಿದಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸೇರಿದಂತೆ ಒಟ್ಟು ಎಂಟು ಮತಗಟ್ಟೆಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ನಡೆಯಿತು. ಒಟ್ಟು 1987 ಮತದಾರರಲ್ಲಿ ಶೇ.62ರಷ್ಟು(1232) ಮಂದಿ ಇಂದು ಮತ ಚಲಾಯಿಸಿದರು. 1614 ಪುರುಷ ಮತದಾರರಲ್ಲಿ 1004 ಮಂದಿ ಹಾಗೂ 373 ಮಹಿಳಾ ಮತದಾರರಲ್ಲಿ 228 ಮಂದಿ ಮತಗಳನ್ನು ಚಲಾಯಿಸಿದ್ದರು.
ಹೆಬ್ರಿಯ ಒಟ್ಟು 135 ಮತಗಳಲ್ಲಿ 110 (90+20) ಚಲಾವಣೆಗೊಂಡರೆ, ಬೈಂದೂರಿನ 254ರಲ್ಲಿ 176 (148+28), ಉಡುಪಿಯ 451ರಲ್ಲಿ 235 (191+44), ಬ್ರಹ್ಮಾವರದ 140ರಲ್ಲಿ 91 (68+23), ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ 302ರಲ್ಲಿ 216 (177+39), ಕುಂದಾಪುರದ 435ರಲ್ಲಿ 240 (200+40), ಕಾರ್ಕಳದ 134ರಲ್ಲಿ 88 (73+15), ಕಾಪುವಿನ 136 ಮತಗಳಲ್ಲಿ 76 (57+19) ಮತಗಳು ಚಲಾವಣೆಗೊಂಡವು.
ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರು ಚುನಾವಣಾಧಿಕಾರಿ ಯಾಗಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಚುನಾವಣಾ ಫಲಿತಾಂಶ ಘೋಷಿಸಿದ ಅವರು ಕೊನೆಗೆ ಜಯಗಳಿಸಿದ ಸುರೇಂದ್ರ ಅಡಿಗರಿಗೆ ಪ್ರಮಾಣ ಪತ್ರವನ್ನು ನೀಡಿದರು.
ಕನ್ನಡ ಭವನಕ್ಕೆ ಆದ್ಯತೆ: 2012ರಿಂದ ಇದೀಗ ಸತತ ಮೂರನೇ ಬಾರಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ನೀಲಾವರ ಸುರೇಂದ್ರ ಅಡಿಗ, ಜಿಲ್ಲೆಯ ಕನ್ನಡಾಭಿಮಾನಿಗಳ ಹಾಗೂ ಹಿತೈಷಿಗಳ ಒತ್ತಾಯದ ಮೇರೆಗೆ ಮೂರನೇ ಸ್ಪರ್ಧಿಸಿದ ತನ್ನನ್ನು ಗೆಲ್ಲಿಸಿರುವುದಕ್ಕೆ ಎಲ್ಲರಿಗೂ ಕೃತಜ್ಞತೆ ಸಲಿಸಿದರು. ಈಗಾಗಲೇ ನೀಲನಕ್ಷೆ ಸಿದ್ಧ ವಾಗಿರುವ ಸರಕಾರ ನಾಯರ್‌ಕೆರೆಯಲ್ಲಿ ನೀಡಿರುವ 11.5 ಸೆಂಟ್ಸ್ ಜಾಗದಲ್ಲಿ ಮೂರು ಕೋಟಿ ರೂ.ಅಂದಾಜು ವೆಚ್ಚದಲ್ಲಿ ಕನ್ನಡ ಭವನ ನಿರ್ಮಿಸುವುದು ತಮ್ಮ ಈ ಬಾರಿಯ ಆದ್ಯತೆಯಾಗಿದೆ ಎಂದವರು ತಿಳಿಸಿದರು.
ಉಡುಪಿ: ಮಹೇಶ್ ಜೋಶಿಗೆ 1008 ಮತ
ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನದೊಂದಿಗೆ ಇಂದು ನಡೆದ ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸ್ಥಾನಕ್ಕೆ ನಡೆದ ಮತದಾನದಲ್ಲಿ ಚಲಾವಣೆಗೊಂಡಿರುವ 1232 ಮತಗಳಲ್ಲಿ ಡಾ.ಮಹೇಶ್ ಜೋಷಿ ಅತ್ಯಧಿಕ 1008 ಮತಗಳನ್ನು ಪಡೆದಿದ್ದಾರೆ.
10 ಮತಗಳು ತಿರಸ್ಕೃತಗೊಂಡಿದ್ದು, ಇನ್ನುಳಿದಂತೆ ಸರಸ್ವತಿ ಚಿಮ್ಮಲಗಿ 81, ನ.ಶ್ರೀ.ಸುಧೀಂದ್ರ ರಾವ್20, ರತ್ನಾಕರ ಶೆಟ್ಟಿ ಕೆ. 21, ವ.ಚ.ಚನ್ನೇಗೌಡ 22, ಮ.ಚಿ.ಕೃಷ್ಣ 8, ಪ್ರಮೋದ್ ಹಳೆಕಟ್ಟೆ 6, ಬಸವರಾಜ್ ಹಳ್ಳೂರ 4, ಬಾಡದ ಭದ್ರಿನಾಥ 1,ಮಾಯಣ್ಣ 9, ರಾಜಶೇಖರ ಮುಲಾಲಿ 12, ಸಿ.ಕೆ.ರಾಮೇಗೌಡ 7, ಶರಣಬಸಪ್ಪ ಕಲ್ಲಪ್ಪ ದಾನಕೈ 3, ಶಿವಪ್ಪ ಮಲ್ಲಪ್ಪ ಬಾಗಲ 1, ಶಿವರುದ್ರಯ್ಯ ಸ್ವಾಮಿ 4, ಶೇಖರಗೌಡ ಮಾಲಿ ಪಾಟೀಲ 14, ಸಂಗಮೇಶ ಬಾಡವಾಡಗಿ 1 ಮತಗಳನ್ನು ಪಡೆದಿದ್ದಾರೆ.







