ಶನಿವಾರಸಂತೆಯಲ್ಲಿ ಶಾಂತಿಸಭೆ: ವೈಯಕ್ತಿಕ ಕಲಹಗಳು ಕೋಮು ಸಂಘರ್ಷವಾಗಿ ಮಾರ್ಪಡುತ್ತಿವೆ

ಶನಿವಾರಸಂತೆ ನ.21 : ಕಳೆದ ಕೆಲವು ದಿನಗಳಿಂದ ಅಶಾಂತಿಯ ವಾತಾವರಣದಲ್ಲಿದ್ದ ಶನಿವಾರಸಂತೆಯಲ್ಲಿ ಕೋಮು ಸೌಹಾರ್ದತೆಯನ್ನು ಮೂಡಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ಹಿಂದೂ ಹಾಗೂ ಮುಸಲ್ಮಾನ ಸಮುದಾಯದ ಮುಖಂಡರುಗಳ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಿತು.
ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಕುಶಾಲನಗರ ಡಿವೈಎಸ್‍ಪಿ ಶೈಲೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೈಯುಕ್ತಿಕ ಕಲಹಗಳು ಕೋಮು ಸಂಘರ್ಷವಾಗಿ ಮಾರ್ಪಡುತ್ತಿವೆ ಎಂದು ಪ್ರಮುಖರು ಬೇಸರ ವ್ಯಕ್ತಪಡಿಸಿದರು.
ಹಿಂದೂ ಹಾಗೂ ಮುಸಲ್ಮಾನರು ಕಳೆದ ಹಲವು ವರ್ಷಗಳಿಂದ ಸಹೋದರತ್ವದಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ 15 ದಿನಗಳಿಂದ ಪಟ್ಟಣದಲ್ಲಿ ನಡೆದಿರುವುದು ಕೋಮು ಗಲಭೆಯಲ್ಲ, ಹಿಂದೂ, ಮುಸ್ಲಿಂ ಜಟಾಪಟಿಯೂ ಅಲ್ಲ. ಪಟ್ಟಣದ ಕುಟುಂಬವೊಂದಕ್ಕೆ ಸಂಬಂಧಪಟ್ಟ ವಿಚಾರವಾಗಿದ್ದು, ಇದು ಕೋಮು ಸಂಘರ್ಷ ಎಂಬಂತೆ ಬಿಂಬಿತವಾಗಿದೆ. ತಮ್ಮ ಸ್ವಾರ್ಥಕ್ಕಾಗಿ ಸೌಹಾರ್ದತೆಯನ್ನು ಕದಡಿ ಅಶಾಂತಿ ಮೂಡಿಸುವ ಪ್ರಯತ್ನವನ್ನು ಯಾರೂ ಮಾಡಬಾರದು ಎಂದು ಸಭೆಯಲ್ಲಿದ್ದವರು ಮನವಿ ಮಾಡಿದರು.
ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಹಾಲಪ್ಪ ಮಾತನಾಡಿ ಪಟ್ಟಣದಲ್ಲಿ ಹಿಂದೂ- ಮುಸ್ಲಿಂ ಎಂಬ ಬೇಧ ಭಾವವಿಲ್ಲದೆ ಸಹೋದರತ್ವದಲ್ಲಿ ಜೀವನ ನಡೆಸುತ್ತಿದ್ದೇವೆ. ಹಿಂದೂ ಸಮುದಾಯದ ದೇವಾಲಯಗಳಿಗೆ ಮುಸ್ಲಿಂ ಬಾಂಧವರು ಸಹಕಾರ ನೀಡುತ್ತಾರೆ, ಅದೇ ರೀತಿ ಮುಸ್ಲಿಂ ಸಮುದಾಯದ ಕಾರ್ಯಕ್ರಮಗಳಿಗೆ ಹಿಂದೂಗಳು ಸಹಕಾರ ನೀಡುತ್ತಿದ್ದಾರೆ. ಇತ್ತೀಚೆಗೆ ನಡೆದ ಘಟನೆಗಳ ಬಗ್ಗೆ ಪೊಲೀಸರು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಅನಂತಕುಮಾರ್ ಮಾತನಾಡಿ ಹಿಂದೂ ಹಾಗೂ ಮುಸ್ಲಿಂ ಎಂಬ ವಿಷ ಬೀಜ ಬಿತ್ತಿ ಎರಡು ಸಮುದಾಯಗಳ ನಡುವೆ ಒಡಕು ಮೂಡಿಸಲಾಗುತ್ತಿದೆ. ನಾವುಗಳೆಲ್ಲರೂ ಒಗ್ಗಟ್ಟನಿಂದ ಜೀವನ ಸಾಗಿಸುತ್ತಿದ್ದು, ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪಾಕಿಸ್ತಾನ್ ಝಿಂದಾಬಾದ್ ಎಂದು ವೀಡಿಯೊ ತಿರುಚಿ ಹಬ್ಬಿಸಿದ್ದ ಪ್ರಕರಣದ ಆರೋಪಿ ಶನಿವಾರಸಂತೆ ಗ್ರಾ.ಪಂ.ಸದಸ್ಯ ಎಸ್.ಎನ್.ರಘು ಮಾತನಾಡಿ, ಪಟ್ಟಣದಲ್ಲಿ ನಡೆದಿರುವುದು ಹಿಂದೂ, ಮುಸ್ಲಿಂ ಗಲಭೆಯಲ್ಲ, ಯಾರು ಶಾಂತಿ ಕದಡುತ್ತಿದ್ದಾರೆ ಎನ್ನುವುದು ಮುಸ್ಲಿಂ ಸಮುದಾಯದವರಿಗೂ ತಿಳಿದಿದೆ. ಇನ್ನು ಮುಂದೆ ಈ ರೀತಿಯ ಘಟನೆ ನಡೆಯದಂತೆ ಕಡಿವಾಣ ಹಾಕಬೇಕು ಎಂದರು.
ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೆಲವರು ಸಣ್ಣ ಪುಟ್ಟ ಘಟನೆಯನ್ನು ಕೋಮು ಗಲಭೆಯಂತೆ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಮುಸ್ಲಿಂ ಬಾಂಧವರ ಉರೂಸ್ ನಡೆಸುವಾಗ ಹಿಂದೂ ಬಾಂಧವರು ಹೋಗುತ್ತಾರೆ, ಅದೇ ರೀತಿ ಪಟ್ಟಣದಲ್ಲಿ ನಡೆಯುವ ಹಿಂದೂ ದೇವರ ವಾರ್ಷಿಕ ಪೂಜಾ ಕಾರ್ಯಕ್ರಮಗಳಿಗೆ ಮುಸ್ಲಿಂ ಬಾಂಧವರು ಸಹಕಾರ ನೀಡುತ್ತಾರೆ ಎಂದು ತಿಳಿಸಿದರು.
ದುಂಡಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಅಬ್ಬಾಸ್ ಮಾತನಾಡಿ ಪಟ್ಟಣದಲ್ಲಿ ನಡೆದಿರುವುದು ಕೋಮು ಗಲಭೆಯಲ್ಲ, ಕುಟುಂಬವೊಂದಕ್ಕೆ ಸಂಬಂಧ ಪಟ್ಟ ಘಟನೆಯಾಗಿದೆ, ಇಲ್ಲಿ ಯಾವತ್ತೂ ಕೋಮು ಗಲಭೆ ನಡೆದಿಲ್ಲ, ಇದನ್ನು ಪೊಲೀಸರು ಗಮನಿಸಬೇಕಾಗಿದೆ. ಇನ್ನು ಮುಂದೆಯೂ ಅಹಿತಕರ ಘಟನೆಗಳು ನಡೆಯಬಾರದು ಎಂದರು.
ಮುಸ್ಲಿಂ ಸಮುದಾಯದ ಹಿರಿಯರಾದ ವಜೀರ್ ಮಾತನಾಡಿ ಶನಿವಾರಸಂತೆಯಲ್ಲಿ ಹಿಂದೂ, ಮುಸ್ಲಿಂ ಎಂಬ ಭಿನ್ನಾಭಿಪ್ರಾಯವಿಲ್ಲ. ವ್ಯಾಪಾರ, ವಹಿವಾಟನ್ನು ಉಭಯ ಕಡೆಯವರು ಒಗ್ಗಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರು.
ಕೊಡ್ಲಿಪೇಟೆ ಗ್ರಾ.ಪಂ ಮಾಜಿ ಅಧ್ಯಕ್ಷ ಔರಂಗಝೇಬ್ ಮಾತನಾಡಿ, ಅಲ್ಪಸಂಖ್ಯಾತರ ಮಕ್ಕಳಿಗೆ ಭದ್ರತೆ ಇಲ್ಲದಂತಾಗಿದ್ದು ಜನಜಂಗುಳಿ ಇರುವ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕೆಂದು ಮನವಿ ಮಾಡಿದರು.
ಗ್ರಾ.ಪಂ ಅಧ್ಯಕ್ಷೆ ಸರೋಜ, ಗ್ರಾ.ಪಂ ಸದಸ್ಯ ಸರ್ದಾರ್ ಆಹಮ್ಮದ್, ವಕೀಲ ಜಗದೀಶ್, ಶಿಕ್ಷಕ ಜಯಕುಮಾರ್, ದಲಿತ ಮುಖಂಡರಾದ ಈರಪ್ಪ, ವೀರೇಂದ್ರ ಸಭೆಯಲ್ಲಿ ಮಾತನಾಡಿದರು.
ಮೊಬೈಲ್ ಬಳಕೆ ಕಡಿಮೆ ಮಾಡಿ
ಕುಶಾಲನಗರ ಡಿವೈಎಸ್‍ಪಿ ಪಿ.ಶೈಲೇಂದ್ರ ಮಾತನಾಡಿ ಈ ಹಿಂದೆ ನಡೆದ ಘಟನೆ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಪಕ್ಷಪಾತವಿಲ್ಲದೆ ತನಿಖೆ ನಡೆಸುತ್ತಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿದೆ ಎಂದರು.
ವಿದ್ಯಾರ್ಥಿಗಳು ಹೆಚ್ಚು ಮೊಬೈಲ್ ಬಳಕೆ ಮಾಡದಂತೆ ಪೋಷಕರು ಹಾಗೂ ಶಿಕ್ಷಕರು ನಿಯಂತ್ರಿಸಬೇಕು. ಮೊಬೈಲ್‍ಗಳಲ್ಲಿ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳದೆ ಫಾರ್ವರ್ಡ್ ಮೆಸೆಜ್‍ಗಳನ್ನು ಹಂಚಿಕೊಂಡು ಕಾಲಹರಣ ಮಾಡಲಾಗುತ್ತಿದೆ. ಇದರಿಂದಲೇ ವಿನಾಕಾರಣ ಕಲಹಗಳು ಸೃಷ್ಟಿಯಾಗುತ್ತಿವೆ ಎಂದು ಅಭಿಪ್ರಾಯಪಟ್ಟರು.
ಪ್ರತಿಯೊಂದು ವಿಷಯಗಳಿಗೂ ಗುಂಪು ಗುಂಪಾಗಿ ಬಂದು ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡುವುದನ್ನು ನಿಲ್ಲಿಸಬೇಕು. ಏನೇ ಸಮಸ್ಯೆ ಎದುರಾದರೂ ಒಂದರೆಡು ಮಂದಿ ಠಾಣೆಗೆ ಬಂದು ಸಮಸ್ಯೆಗಳನ್ನು ಹೇಳಿಕೊಳ್ಳುವ ಸಂಪ್ರದಾಯ ಬೆಳೆಸಿಕೊಳ್ಳಬೇಕು. ಪೊಲೀಸರು ಯಾರ ಪರವು ಅಥವಾ ವಿರೋಧವೂ ಇಲ್ಲ. ಕಾನೂನಿನ ಚೌಕಟ್ಟಿನಡಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಜನಜಂಗುಳಿ ಹೆಚ್ಚು ಇರುವ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸುವ ಬಗ್ಗೆ ಡಿವೈಎಸ್‍ಪಿ ಭರವಸೆ ನೀಡಿದರು.
ಶನಿವಾರಸಂತೆ ಸಿಐ ಪರಶಿವಮೂರ್ತಿ, ಸೋಮವಾರಪೇಟೆ ಸಿಐ ಮಹೇಶ್, ಕುಶಾಲನಗರ ಸಿಐ ಮಹೇಶ್, ಪ್ರದೀಪ್ ಹಾಗೂ ಲೋಕೇಶ್ ಉಪಸ್ಥಿತರಿದ್ದರು.







