ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ: ನೀರಸ ಮತದಾನ

ಬೆಂಗಳೂರು, ನ. 21: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ, ಆಯಾ ಜಿಲ್ಲಾವಾರು ಅಧ್ಯಕ್ಷ ಸ್ಥಾನಗಳಿಗೆ ನಡೆದ ಮತದಾನ ಪ್ರಕ್ರಿಯೆ ನೀರಸವಾಗಿದ್ದು, ಒಟ್ಟಾರೆ ಶೇ.50.09ರಷ್ಟು ಮಾತ್ರ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ರಾಜ್ಯದ ಎಲ್ಲ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಮತದಾನ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯದಾಗಿದ್ದು, ಒಟ್ಟು ಶೇ.28.88ರಷ್ಟು ಮತದಾನವಾಗಿದೆ. ಇನ್ನೂ ಕೊಡುಗು ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಒಟ್ಟು ಶೇ.71.18ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಅದೇ ರೀತಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.44.73, ಶಿವಮೊಗ್ಗ ಶೇ.59.26, ಕೋಲಾರ ಶೇ.70.42, ಬೆಂಗಳೂರು ಗ್ರಾಮಾಂತರ 58.40 ಸೇರಿದಂತೆ ಒಟ್ಟು 305373 ಮತದಾರರ ಪೈಕಿ 159093 ಮತದಾರರು ಮತದಾನ ಮಾಡಿದ್ದಾರೆ. ಒಟ್ಟು ಶೇ.52.09ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿ: ಈ ಹಿಂದೆಲ್ಲಾ ಬೆಂಗಳೂರಿನವರು ಮತ ಚಲಾಯಿಸಲು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗುತ್ತಿತ್ತು. ನಗರದ ಎಲ್ಲ ಭಾಗಗಳ ಮತದಾರರು ಇಲ್ಲಿಗೆ ಬಂದು ಮತ ಚಲಾಯಿಸಬೇಕಿತ್ತು. ಆದರೆ, ಇದೇ ಮೊದಲ ಬಾರಿಗೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ಕ್ಷೇತ್ರದಲ್ಲೇ ಮತ ಚಲಾಯಿಸಲು ಅನುಕೂಲವಾಗುವಂತೆ 42 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಆದರೂ ನೀರಸ ಮತದಾನ ನಡೆದಿದೆ.
ಇನ್ನು, ರಾಜ್ಯಾದ್ಯಂತರ ಬೆಳಗ್ಗೆ 8 ಕ್ಕೆ ಆರಂಭವಾದ ಮತದಾನ, ಸಂಜೆ 4ಕ್ಕೆ ಮುಗಿಯಿತು. ನಂತರ ಎಣಿಕೆ ಕಾರ್ಯ ಆಯಾ ಕ್ಷೇತ್ರದ ಮತಗಟ್ಟೆಗಳಲ್ಲೇ ನಡೆಯಿತು. ಅಲ್ಲಿನ ಮತಗಳ ಸಂಖ್ಯೆಯನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗೆ ಕಳುಹಿಸಲಾಯಿತು. ಅಲ್ಲದೆ, ಮತ ಚಲಾಯಿಸಲು ರಾಜ್ಯ ವ್ಯಾಪಿ 420 ಮತಗಟ್ಟೆಗಳನ್ನು ಗುರುತಿಸಲಾಗಿತ್ತು. ಇನ್ನೂ, ಪ್ರಮುಖವಾಗಿ ನ.24 ರಂದು ಗಡಿನಾಡ ಘಟಕಗಳ ಅಧ್ಯಕ್ಷರ ಚುನಾವಣೆಗೆ ಸಂಬಂಧಪಟ್ಟ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಿ, ಫಲಿತಾಂಶ ಘೋಷಿಸಲಾಗುತ್ತದೆ.
ಅದೇ ದಿನ ಜಿಲ್ಲೆಗಳಿಂದ ಬಂದ ಮತಗಳು ಹಾಗೂ ಅಂಚೆಗಳಿಂದ ಬಂದ ಮತಗಳನ್ನು ಕ್ರೋಢೀಕರಿಸಿ ರಾಜ್ಯಾಧ್ಯಕ್ಷ ಸ್ಥಾನದ ಫಲಿತಾಂಶ ಪ್ರಕಟಿಸಲಾಗುತ್ತದೆ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ 21 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, ಮ.ಚಿ. ಕೃಷ್ಣ, ವ.ಚ.ಚನ್ನೇಗೌಡ, ಮಹೇಶ್ ಜೋಶಿ, ಸಂಗಮೇಶ ಬಾದವಾಡಗಿ, ಸಿ.ಕೆ. ರಾಮೇಗೌಡ, ರಾಜಶೇಖರ ಮುಲಾಲಿ, ಬಸವರಾಜ ಶಿ. ಹಳ್ಳೂರ, ಬಾಡದ ಭದ್ರಿನಾಥ್, ಶಿವರಾಜ ಪಾಟೀಲ, ಸರಸ್ವತಿ ಶಿವಪ್ಪ ಚಿಮ್ಮಲಗಿ, ವೈ. ರೇಣುಕ, ಶೇಖರಗೌಡ ಮಾಲಿಪಾಟೀಲ, ಕೆ. ರತ್ನಾಕರ ಶೆಟ್ಟಿ, ವಾಲ್ಮೀಕಪ್ಪ ಹ. ಯಕ್ಕರನಾಳ, ಮಾಯಣ್ಣ, ಪ್ರಮೋದ್ ಹಳಕಟ್ಟಿ, ಶಿವಪ್ಪ ಮಲ್ಲಪ್ಪ ಬಾಗಲ, ಕೆ.ರವಿ ಅಂಬೇಕರ, ಸುಧೀಂದ್ರರಾವ್, ಶರಣಬಸಪ್ಪ ಕಲ್ಲಪ್ಪ ದಾನಕೈ ಹಾಗೂ ಶಿವರುದ್ರಸ್ವಾಮಿ ಸ್ಪರ್ಧಿಸಿದ್ದಾರೆ.
ತಗ್ಗಿದ ಮತದಾನ: 2012ನೇ ಸಾಲಿನಲ್ಲಿ ಶೇ.59 ಮತದಾನವಾಗಿತ್ತು. ಈ ಪ್ರಮಾಣ 2016ರಲ್ಲಿ ಶೇ.57ಕ್ಕೆ ಕುಸಿದು ಇದೀಗ ಶೇ.52ಕ್ಕಿಳಿದಿದೆ. ಅಲ್ಲದೆ, 2016ರಲ್ಲಿ ಒಟ್ಟು 1.89 ಲಕ್ಷ ಮತದಾರರಲ್ಲಿ 1.08 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಈ ಬಾರಿ 3.10 ಲಕ್ಷ ಮತದಾರರಲ್ಲಿ 1.59 ಲಕ್ಷ ಮತದಾರರು ಮತ ಚಲಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಮತದಾನ..!:
ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ 11 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಪ್ರತಿ ಬೂತ್‍ನಲ್ಲಿ 3 ರಿಂದ 4 ಮಂದಿ ಏಜೆಂಟರಿದ್ದುದು ಬಿಟ್ಟರೆ ಬೇರೆಯವರಿಗೆ ಒಳ ಪ್ರವೇಶಿಸಲು ಅವಕಾಶ ನೀಡಿರಲಿಲ್ಲ. ಜತೆಗೆ 4-5 ಮಂದಿ ಅಧಿಕಾರಿಗಳಿದ್ದರು. ಕೆಲವು ಮತದಾರರು ವಿಳಾಸ ತಪ್ಪಾಗಿ ಮತಗಟ್ಟೆಗಳಿಗೆ ಬಂದರು. ಆದರೆ ಅಧಿಕಾರಿಗಳು ಪರಿಶೀಲಿಸಿ, ಸರಿಯಾದ ಸ್ಥಳಕ್ಕೆ ಕಳುಹಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬೆಂಗಳೂರಿನಲ್ಲಿ ಪ್ರಕಾಶ ಮೂರ್ತಿ ಜಯಭೇರಿ: ಬೆಂಗಳೂರು, ನ.20: ಕನ್ನಡ ಸಾಹಿತ್ಯ ಪರಿಷತ್ತಿನ-2021ನೆ ಸಾಲಿನ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ರಾಜಧಾನಿ ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಎಂ. ಪ್ರಕಾಶ ಮೂರ್ತಿ ಆಯ್ಕೆಯಾಗಿದ್ದಾರೆ. ಎಂ. ಪ್ರಕಾಶ ಮೂರ್ತಿ ಹಾಗೂ ಎಂ.ತಿಮ್ಮಯ್ಯ ನಡುವೆಯೇ ನೇರ ಹಣಾಹಣಿ ಎಂಬಂತಿದ್ದ ಈ ಚುನಾವಣೆಯಲ್ಲಿ ಮತದಾನದಲ್ಲೂ ಅದೇ ಫಲಿತಾಂಶ ಹೊರಬಿದ್ದಿದ್ದು, ಪ್ರಕಾಶ ಮೂರ್ತಿ ಜಯಗೊಂಡಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒಟ್ಟು 10,538 ಮತಗಳು ಚಲಾವಣೆ ಆಗಿದ್ದವು. ಅತಿ ಹೆಚ್ಚು ಮತದಾರರು ಅಂತಿಮವಾಗಿ ಪ್ರಕಾಶ ಮೂರ್ತಿ ಅವರಿಗೆ ಮಣೆ ಹಾಕಿದ್ದಾರೆ.
ಅದೇ ರೀತಿ, ಬೆಂಗಳೂರು ಗ್ರಾಮಾಂತರ ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ಸ್ಥಾನಕ್ಕೆ ಬಿ.ಎಂ.ಕೃಷ್ಣಪ್ಪ, ಮೈಸೂರು-ಮಡ್ಡೀಕೆರೆ ಗೋಪಾಲ್, ಶಿವಮೊಗ್ಗ-ಡಿ.ಮಂಜುನಾಥ, ಮಂಡ್ಯ- ಸಿ.ಕೆ.ರವಿಕುಮಾರ ಚಾಮಲಾಪುರ, ತುಮಕೂರು- ಕೆ.ಎಸ್.ಸಿದ್ದಲಿಂಗಪ್ಪ, ಬಾಗಲಕೋಟೆ-ಶಿವಾನಂದ ಶೆಲ್ಲಿಕೇರಿ.ಧಾರವಾಡ-ಡಾ.ಲಿಂಗರಾಜ ಅಂಗಡಿ, ಉತ್ತರಕನ್ನಡ-ಬಿ.ಎನ್?. ವಾಸರೆ, ರಾಯಚೂರು-ರಂಗಣ್ಣ ಪಾಟೀಲ್ ಹಳ್ಳುಂಡಿ, ಕೊಡಗು-ಕೇಶವ ಕಾಮತ್, ಹಾಸನ-ಡಾ.ಎಚ್.ಎಲ್. ಮಲ್ಲೇಶ ಗೌಡ, ಬೀದರ್-ಸುರೇಶ ಚನ್ನಶೆಟ್ಟಿ ಆಯ್ಕೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.






.jpg)
.jpg)
.jpg)
.jpg)

