ಚುನಾವಣಾ ಕ್ಷೇತ್ರವನ್ನು ನಿರ್ಧರಿಸುವ ಅಧಿಕಾರ: ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ವರ್ಗಾವಣೆ

ಬೆಂಗಳೂರು, ನ. 21: ಪಂಚಾಯತ್‍ಗಳ ಚುನಾವಣೆಗಳಿಗಾಗಿ ಚುನಾವಣಾ ಕ್ಷೇತ್ರವನ್ನು ನಿರ್ಧರಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದ ಬದಲಾಗಿ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ವಹಿಸಿ, ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಂ.ಲಕ್ಷ್ಮಿನಾರಾಯಣ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಕಾರ್ಯಗಳನ್ನು ನಿಗದಿಗೊಳಿಸಿ ಆದೇಶ ಹೊರಡಿಸಲಾಗಿದ್ದು, ಹಿಂದಿನ ಜನಗಣತಿಯ ಜನಸಂಖ್ಯೆಯನ್ನು ಆಧರಿಸಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‍ಗೆ ಚುನಾಯಿಸಬೇಕಾದ ಒಟ್ಟು ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸುವುದಕ್ಕಾಗಿ ಹಾಗೂ ಪಂಚಾಯತ್‍ಗೆ ಚುನಾಯಿಸಬೇಕಾದ ಅಭ್ಯರ್ಥಿಗಳಿಗೆ ವಾರ್ಡ್ ಮತ್ತು ಕ್ಷೇತ್ರಗಳ ಗಡಿಗಳನ್ನು ನಿರ್ಧರಿಸುವ ಬಗ್ಗೆ ಸೂಕ್ತ ಶಿಫಾರಸ್ಸನ್ನು ಸರಕಾರಕ್ಕೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಇನ್ನು ಕ್ಷೇತ್ರಗಳ ಜನಸಂಖ್ಯೆಯನ್ನು ನಿರ್ಧರಿಸುವಾಗ ಚುನಾವಣಾ ಕ್ಷೇತ್ರಗಳು ಭೌಗೋಳಿಕವಾಗಿ ಸಮೀಪ ಪ್ರದೇಶಗಳನ್ನು ಒಳಗೊಂಡಿರುವುದನ್ನು ಖಚಿತಪಡಿಸಿಕೊಂಡು ಸರಕಾರಕ್ಕೆ ಶಿಫಾರಸು ಸಲ್ಲಿಸಬೇಕು. ಸರಕಾರ ಕಾಲಕಾಲಕ್ಕೆ ವಹಿಸುವ ಇತರೆ ಜವಾಬ್ದಾರಿಗಳನ್ನು ಸಹ ಆಯೋಗ ನಿರ್ವಹಿಸಬೇಕು ಎಂದು ತಿಳಿಸಲಾಗಿದೆ.





