ಬಿಎಂಟಿಸಿ ಚಾಲಕನಿಗೆ 1 ತಿಂಗಳು ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಬೆಂಗಳೂರು, ನ. 21: ಅಜಾಗರೂಕತೆಯಿಂದ ಬಸ್ ಚಾಲನೆ ಮಾಡಿ ಮಹಿಳೆಗೆ ಗಾಯವುಂಟು ಮಾಡಿದ ಬಿಎಂಟಿಸಿ ಚಾಲಕನಿಗೆ 1 ತಿಂಗಳು ಕಾರಾಗೃಹ ಶಿಕ್ಷೆ ಮತ್ತು 2 ಸಾವಿರ ರೂ.ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.
ಪೀಣ್ಯ ಡಿಪೋ ಚಾಲಕ ಎಚ್.ಎನ್.ಮಂಜುನಾಥ್, ಶಿಕ್ಷೆಗೆ ಒಳಗಾದ ಅಪರಾಧಿ. 2019ರ ಬೆಳಗ್ಗೆ 11.30ರಲ್ಲಿ ಎನ್.ಸವಿತಾ ಎಂಬಾಕೆ ಯಶವಂತಪುರಕ್ಕೆ ಹೋಗಲು ಎಚ್‍ಎಂಟಿ ಆಸ್ಪತ್ರೆಯ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದರು.
ಬಿಎಂಟಿಸಿ ಬಸ್ ಹತ್ತಿದ್ದಾಗ ಚಾಲಕ ಪ್ರಯಾಣಿಕರನ್ನು ಗಮನಿಸದೆ ಮುಂದೆ ಚಲಾಯಿಸಿದ್ದ. ಆಗ ಸವಿತಾ ಕೆಳಗೆ ಬಿದ್ದು ಎರಡು ಕೈ ಮತ್ತು ಸೊಂಟಕ್ಕೆ ಗಾಯವಾಗಿತ್ತು. ಈ ಬಗ್ಗೆ ಸವಿತಾ, ನೀಡಿದ ದೂರಿನ ಮೇರೆಗೆ ಚಾಲಹಳ್ಳಿ ಸಂಚಾರ ಪೊಲೀಸರು ತನಿಖೆ ನಡೆಸಿ ಕೋರ್ಟ್‍ಗೆ ಚಾಲಕನ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಚಾಲಕನ ಮೇಲಿನ ಆರೋಪ ಸಾಬೀತಾಗಿ ಅಪರಾಧಿ ಎಂದು ಘೋಷಣೆ ಮಾಡಿ 1 ತಿಂಗಳು ಶಿಕ್ಷೆ ಮತ್ತು 2 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





