ನೋಂದಣಿಯಾಗದೆ ನೇಪಾಳದಲ್ಲಿ ಪ್ರಸಾರ ಆರಂಭಿಸಿದ ರಾಮದೇವ್ ಒಡೆತನದ 2 ಟಿವಿ ವಾಹಿನಿಗಳು
ವಿವಾದದಲ್ಲಿ ಪತಂಜಲಿ ಟಿವಿ

ಕಠ್ಮಂಡು, ನ.21: ಯೋಗ ಗುರು ರಾಮದೇವ್ ಒಡೆತನದ ಎರಡು ಟಿವಿ ವಾಹಿನಿಗಳು ನೋಂದಣಿಯಾಗದೆ ಕಾರ್ಯಾಚರಿಸುತ್ತಿರುವುದು ಬೆಳಕಿಗೆ ಬಂದಿದ್ದು, ಆ ಹಿಮಾಲಯ ರಾಷ್ಟ್ರದಲ್ಲಿ ವಿವಾದದ ಬಿರುಗಾಳಿಯನ್ನು ಎಬ್ಬಿಸಿದೆ.
ಕಠ್ಮಂಡುವಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ನೇಪಾಳ ಪ್ರಧಾನಿ ಶೇರ್ ಬಹಾದ್ದೂರ್ ದೇವುಬಾ ಅವರು ‘ಅಸ್ಥಾ ನೇಪಾಳ ಟಿವಿ’ ಹಾಗೂ ‘ಪತಂಜಲಿ ನೇಪಾಳ ಟಿವಿ’ಯನ್ನು ಉದ್ಘಾಟಿಸಿದ್ದರು. ಪತಂಜಲಿ ಸಂಸ್ಥೆ ಬಾಬಾರಾಮದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಮತ್ತು ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಉಪಸ್ಥಿತರಿದ್ದರು.
‘‘ನೇಪಾಳದ ಕಾನೂನಿನ ಪ್ರಕಾರ ಮಾಧ್ಯಮ ವಲಯದಲ್ಲಿ ವಿದೇಶಿ ಹೂಡಿಕೆಯನ್ನು ನಿಷೇಧಿಸಲಾಗಿದೆ. ಈ ಎರಡು ಟಿವಿ ವಾಹಿನಿಗಳ ನೋಂದಣಿಗೆ ಇದುವರೆಗೆ ನಾವು ಯಾವುದೇ ಯಾವುದೇ ಅರ್ಜಿಯನ್ನು ಸ್ವೀಕರಿಸಿಲ್ಲ’ ’ ಎಂದು ನೇಪಾಳದ ಮಾಹಿತಿ ಹಾಗೂ ಪ್ರಸಾರ ಲಾಖೆಯ ಮಹಾನಿರ್ದೇಶಕ ಗೊಗೋನ್ ಬಹಾದೂರ್ ಹಮಾಲ್ ತಿಳಿಸಿದ್ದಾರೆ.
ಟಿವಿ ವಾಹಿನಿಗಳ ನೋಂದಣಿಯ ಬಗ್ಗೆ ಅಧ್ಯಯನ ನಡೆಸಲು ನಾವು ತನಿಖಾ ತಂಡವೊಂದನ್ನು ರಚಿಸಿದ್ದೇವೆ. ಒಂದು ವೇಳೆ ಪೂರ್ವಭಾವಿಯಾಗಿ ಅನುಮೋದನೆ ಪಡೆಯದೆ ಪ್ರಸಾರವನ್ನು ಆರಂಭಿಸಿದಲ್ಲಿ ಕ್ರಮ ಕೈಗೊಳ್ಳಲಿದ್ದೇವೆ’’ ಎಂದವರು ಹೇಳಿದ್ದಾರೆ.
ಬಹುರಾಷ್ಟ್ರೀಯ ಕಂಪೆನಿಯಾದ ಪತಂಜಲಿಯು ಈ ಎರಡು ವಾಹಿನಿಗಳಲ್ಲಿ ಹಣವನ್ನು ಹೂಡಿಕೆ ಮಾಡಿದೆ. ರಾಮದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಅವರು ಪತಂಜಲಿ ಸಂಸ್ಥೆಯ ಮುಖ್ಯ ಪ್ರವರ್ತಕರಾಗಿದ್ದಾರೆ. ಮಾಧ್ಯಮ ಹಾಗೂ ಚಿತ್ರರಂಗಗಳಲ್ಲಿ ವಿದೇಶಿ ಹೂಡಿಕೆಗೆ ನೇಪಾಳದಲ್ಲಿ ಅನುಮತಿಯಿಲ್ಲ. ಆದರೆ ಒಂದು ವೇಳೆ ವಿದೇಶಿ ಟಿವಿ ವಾಹಿನಿಯು ನೇಪಾಳದಿಂದ ಕಾರ್ಯಾಚರಿಸುವ ಅಗತ್ಯ ಬಿದ್ದಲ್ಲಿ ಅದಕ್ಕೆ ಬೇಕಾದ ಎಲ್ಲಾ ಕಾನೂನಾತ್ಮಕ ಪ್ರಕ್ರಿಯೆಳನ್ನು ಅದು ಪೂರ್ಣಗೊಳಿಸಬೇಕಾಗುತ್ತದೆ.
ಈ ವರ್ಷದ ಜೂನ್ ತಿಂಗಳಲ್ಲಿ ಪತಂಜಲಿ ಸಂಸ್ಥೆಯ ಬಿಡುಗಡೆಗೊಳಿಸಿದ ಕೊರೋನ ಕಿಟ್ ನೋಂಣಿಗೊಂಡಿರಲಿಲ್ಲವೆಂಬ ಕಾರಣದಿಂದ ನೇಪಾಳ ಸರಕಾರವು ಅದನ್ನು ನಿಷೇಧಿಸಿತ್ತು. ಆ ಬಳಿಕ ನೇಪಾಳ ಸರಕಾರದ ಕಾನೂನಿಗೆ ಅನುಗುಣವಾಗಿ ಕೊರೋನ ಕಿಟ್ ನೋಂದಣಿಯಾದ ಬಳಿಕ ನಿಷೇಧ ಹಿಂಪಡೆಯಲಾಗಿತ್ತು.







