ಮತಾಂತರ ನಿಷೇಧ ಕಾನೂನಿನಿಂದ ಐಕ್ಯತೆ ದಕ್ಕೆ: ಸಿಎಂಗೆ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೋ ಪತ್ರ

ಬೆಂಗಳೂರು, ನ.21: ಮತಾಂತರ ನಿಷೇಧ ಕಾನೂನು ತಾರತಮ್ಯದಿಂದ ಕೂಡಿದ್ದು, ಇದರಿಂದ ಅಲ್ಪಸಂಖ್ಯಾತರ ಹಕ್ಕುಗಳ ಕಗ್ಗೊಲೆಯಾಗುತ್ತದೆ. ರಾಜ್ಯದ ಶಾಂತಿ ಮತ್ತು ಐಕ್ಯತೆಗೆ ಧಕ್ಕೆ ಆಗುತ್ತದೆ ಎಂದು ನಗರದ ಆರ್ಚ್ ಬಿಷಪ್ ರೆವರೆಂಡ್ ಪೀಟರ್ ಮಚಾದೋ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಮತಾಂತರ ನಿಷೇಧ ಕಾನೂನನ್ನು ವಿರೋಧಿಸಿ ಬರೆದ ಈ ಪತ್ರದಲ್ಲಿ ಅವರು, ಸಂವಿಧಾನದ 25 ವಿಧಿ ಮತ್ತು 26 ವಿಧಿಯನ್ನು ಉಲ್ಲೇಖಿಸಿ, ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಲಾಗಿದ್ದು, ಮತಾಂತರ ಕಾಯ್ದೆಯು ಧಾರ್ಮಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ. ಕ್ರೈಸ್ತ ಮಿಷನರಿಗಳು ಮತ್ತು ಚರ್ಚ್‍ಗಳ ಸಮೀಕ್ಷೆ ನಡೆಸುವ ಸರಕಾರದ ನಿರ್ಧಾರವನ್ನೂ ವಿರೋಧಿಸಿ, ಜನಗಣತಿ ವೇಳೆಯೇ ಸರಕಾರ ಈ ಬಗ್ಗೆ ಮಾಹಿತಿ ಸಂಗ್ರಹಿಸಿರುವುದರಿಂದ ಮತ್ತೊಮ್ಮೆ ಸಂಗ್ರಹಿಸುವ ಅಗತ್ಯವಿಲ್ಲ ಅವರು ತಿಳಿಸಿದ್ದರು.
ಕ್ರಿಸ್‍ಮಸ್‍ನಲ್ಲಿ ಜನಸಾಮಾನ್ಯರಿಗೆ ಆಹಾರವನ್ನು ವಿತರಿಸುವಾಗ ಗುಂಪಿನಲ್ಲಿ ಯಾರಾದರೂ ಹಿಂದೂ ಇದ್ದರೆ, ಅದು ವ್ಯಕ್ತಿಯನ್ನು ಕ್ರಿಶ್ಚಿಯನ್ ಧರ್ಮಕ್ಕೆ ಆಮಿಷವೊಡ್ಡುತ್ತದೆ ಎಂದು ಅರ್ಥೈಸಲಾಗುತ್ತದೆಯೇ? ಅಥವಾ, ಒಂದು ಮಗುವು ಯೇಸುವಿನ ಚಿತ್ರವಿರುವ ಶಾಲೆಯ ಕ್ಯಾಲೆಂಡರ್ ಅನ್ನು ಮನೆಗೆ ಕೊಂಡೊಯ್ದರೆ, ಅದು ಮತಾಂತರದ ಪ್ರಯತ್ನಗಳಿಗೆ ಆಧಾರವಾಗಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.





