ನ್ಯೂಝಿಲ್ಯಾಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ಟ್ವೆಂಟಿ-20 ಸರಣಿ ಕೈವಶ

Photo: BCCI
ಕೋಲ್ಕತಾ, ನ.21: ನಾಯಕ ರೋಹಿತ್ ಶರ್ಮಾ ಗಳಿಸಿದ ಅರ್ಧಶತಕ ಹಾಗೂ ಅಕ್ಷರ್ ಪಟೇಲ್ ಆಕರ್ಷಕ ಬೌಲಿಂಗ್ ನೆರವಿನಿಂದ ಭಾರತ ತಂಡವು ನ್ಯೂಝಿಲ್ಯಾಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯವನ್ನು 73 ರನ್ ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಜಯಿಸಿ ಕ್ಲೀನ್ ಸ್ವೀಪ್ ಸಾಧಿಸಿದೆ.
ಭಾರತ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಆಡಿರುವ ಮೊದಲ ಸರಣಿಯಲ್ಲಿ 'ಹ್ಯಾಟ್ರಿಕ್' ಗೆಲುವು ದಾಖಲಿಸಿ ಮಿಂಚಿದೆ.
ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 185 ರನ್ ಕಠಿಣ ಗುರಿ ಪಡೆದ ನ್ಯೂಝಿಲ್ಯಾಂಡ್ 17.2 ಓವರ್ ಗಳಲ್ಲಿ 111 ರನ್ ಗಳಿಸಿ ಹೀನಾಯ ಸೋಲುಂಡಿತು. ಕಿವೀಸ್ ಆರಂಭಿಕ ಬ್ಯಾಟ್ಸ್ ಮನ್ ಮಾರ್ಟಿನ್ ಗಪ್ಟಿಲ್(51, 36 ಎಸೆತ, 4 ಬೌಂಡರಿ, 4 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ಟಿಮ್ ಸೆಫರ್ಟ್(17) ಹಾಗೂ ಫರ್ಗುಸನ್ (14) ಎರಡಂಕೆಯ ಸ್ಕೋರ್ ಗಳಿಸಿದರು. ಅಗ್ರ ಕ್ರಮಾಂಕದ ಆಟಗಾರರಾದ ಮಾರ್ಕ್ ಚಾಪ್ ಮನ್ ಹಾಗೂ ಗ್ಲೆನ್ ಫಿಲಿಪ್ಸ್ ಖಾತೆ ತೆರೆಯಲು ವಿಫಲರಾದರು. ಹರ್ಷಲ್ ಪಟೇಲ್(2-26) 2 ವಿಕೆಟ್ ಪಡೆದು ಕಿವೀಸ್ ಆಲೌಟ್ ಆಗಲು ನೆರವಾದರು.
ಇದಕ್ಕು ಮೊದಲು ನಾಯಕ ರೋಹಿತ್ ಶರ್ಮಾ ಗಳಿಸಿದ ಅರ್ಧಶತಕ ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಉಪಯುಕ್ತ ಕೊಡುಗೆಯ ನೆರವಿನಿಂದ ಭಾರತ ಕ್ರಿಕೆಟ್ ಅಂತಿಮ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ಗೆಲುವಿಗೆ 185 ರನ್ ಗುರಿ ನೀಡಿತು .