ಲಕ್ನೋದಲ್ಲಿ ಸೋಮವಾರ ರೈತರ ಮಹಾಪಂಚಾಯತ್

ಲಕ್ನೋ, ನ. 21: ತಮ್ಮ ಶಕ್ತಿ ಪ್ರದರ್ಶನದ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಲಕ್ನೋದಲ್ಲಿ ಸೋಮವಾರ ಮಹಾಪಂಚಾಯತ್ ನಡೆಸಲಿದೆ.
ನಗರದ ಇಕೋ ಗಾರ್ಡನ್ ನಲ್ಲಿ ನಡೆಯಲಿರುವ ಈ ಮಹಾಪಂಚಾಯತ್ಗೆ ಕೆಲವು ತಿಂಗಳ ಹಿಂದೆಯೇ ಯೋಜಿಸಲಾಗಿತ್ತು.
ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಕುರಿತು ಕೇಂದ್ರ ಸರಕಾರ ಕಾನೂನು ರೂಪಿಸುವ ಹಾಗೂ ಕೇಂದ್ರದ ಸಹಾಯಕ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸುವ ವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ರೈತ ನಾಯಕರು ಹೇಳಿದ್ದಾರೆ.
ರವಿವಾರ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್, ‘‘ಎಂಎಸ್ಪಿ ಅಧಿಕಾರ್ ಕಿಸಾನ್ ಮಹಾ ಪಂಚಾಯತ್ ಗೆ ಲಕ್ನೋ ಚಲೊ’’ ಎಂದಿದ್ದಾರೆ.
ಈಗ ಮಾತನಾಡಲಾಗುತ್ತಿರುವ ಕೃಷಿ ಸುಧಾರಣೆ ನಕಲಿ ಹಾಗೂ ತೋರಿಕೆಯದ್ದು. ಕೃಷಿ ಸುಧಾರಣೆ ರೈತರ ಸಂಕಷ್ಟಗಳಿಗೆ ಅಂತ್ಯ ಹಾಡುವುದಿಲ್ಲ. ರೈತರಿಗೆ ಹಾಗೂ ಕೃಷಿಗೆ ಅತಿ ದೊಡ್ಡ ಸುಧಾರಣೆ ಎಂದರೆ, ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಗೆ ಸಂಬಂಧಿಸಿ ಕಾನೂನು ಜಾರಿಗೆ ತರುವುದು ಎಂದು ಅವರು ಹೇಳಿದ್ದಾರೆ.
‘‘ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. ಆದರೆ, ಎಂಎಸ್ಪಿ ಕಾನೂನು ಯಾವಾಗ ರೂಪಿಸುತ್ತಾರೆ ಎಂದು ಹೇಳಿಲ್ಲ. ಎಂಎಸ್ಪಿ ಕಾನೂನು ರೂಪಿಸುವ ವರೆಗೆ ಹಾಗೂ ಕೇಂದ್ರದ ಸಹಾಯಕ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸುವ ವರೆಗೆ ಪ್ರತಿಭಟನೆ ಮುಂದುವರಿಯಲಿದೆ ’’ ಎಂದು ಬಿಕೆಯುನ ಉತ್ತರಪ್ರದೇಶ ಘಟಕದ ಉಪಾಧ್ಯಕ್ಷ ಹರ್ನಾಮ್ ಸಿಂಗ್ ವರ್ಮಾ ಹೇಳಿದ್ದಾರೆ.