ದೇಶದ ಅತಿ ದೊಡ್ಡ ತೈಲ ಕ್ಷೇತ್ರದ ಖಾಸಗೀಕರಣ ಪ್ರಸ್ತಾವಕ್ಕೆ ಒಎನ್ಜಿಸಿ ಅಧಿಕಾರಿಗಳ ವಿರೋಧ

ಹೊಸದಿಲ್ಲಿ, ನ.21: ಒಎನ್ಜಿಸಿಯ ಅತಿ ದೊಡ್ಡ ತೈಲ ಮತ್ತು ಅನಿಲ ನಿಕ್ಷೇಪವನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸುವ ಪೆಟ್ರೋಲಿಯಂ ಸಚಿವಾಲಯದ ಪ್ರಸ್ತಾಪಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿ ಕಂಪನಿಯ ವೈಜ್ಞಾನಿಕ ಮತ್ತು ತಾಂತ್ರಿಕ ಅಧಿಕಾರಿಗಳ ಒಕ್ಕೂಟವು ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರವನ್ನು ಬರೆದಿದೆ.
ಉತ್ಪಾದನೆಯನ್ನು ಹೆಚ್ಚಿಸಲು ವಿದೇಶಿ ಕಂಪನಿಗೆ ಒಎನ್ಜಿಸಿಯ ಮುಂಬೈ ಹೈ ಹಾಗೂ ಬಾಸ್ಸೀನ್ ಮತ್ತು ಸ್ಯಾಟಲೈಟ್ (ಬಿ ಆ್ಯಂಡ್ ಎಸ್) ಕರಾವಳಿಯಾಚೆಯ ಆಸ್ತಿಗಳಲ್ಲಿ ಶೇ.60ರಷ್ಟು ಪಾಲು ಬಂಡವಾಳ ಮತ್ತು ನಿರ್ವಹಣೆಯ ಮಾರಾಟವು ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ (ಅನ್ವೇಷಣೆ) ಅಮರನಾಥ್ ಅವರು ಮಂಡಿಸಿರುವ ಪ್ರಸ್ತಾವದಲ್ಲಿ ಒಳಗೊಂಡಿದೆ. ಈ ಪ್ರಸ್ತಾವವು ಒಎನ್ಜಿಸಿಯ 17,000 ಅಧಿಕಾರಿಗಳನ್ನು ಪ್ರತಿನಿಧಿಸುತ್ತಿರುವ ಒಕ್ಕೂಟದ ಪ್ರತಿರೋಧಕ್ಕೆ ಗುರಿಯಾಗಿದೆ. ಸರಕಾರವು ತನ್ನ ಪ್ರಮುಖ ಆಸ್ತಿಗಳನ್ನು ವಿದೇಶಿ ಕಂಪನಿಗಳಿಗೆ ಒಪ್ಪಿಸುವ ಬದಲು ಒಎನ್ಜಿಸಿಯನ್ನು ಇನ್ನಷ್ಟು ಸಬಲಗೊಳಿಸಬೇಕು ಮತ್ತು ಅದಕ್ಕೆ ಸಮಾನ ಪೈಪೋಟಿಗೆ ಅವಕಾಶವನ್ನು ಕಲ್ಪಿಸಬೇಕು ಎಂದು ಒಕ್ಕೂಟವು ಹೇಳಿದೆ.
ಆಮದುಗಳನ್ನು ತಗ್ಗಿಸುವ ಮೂಲಕ ದೇಶಿಯ ಉತ್ಪಾದನೆಯನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಒಎನ್ಜಿಸಿ ಮತ್ತು ಅದರ ಉದ್ಯೋಗಿಗಳು ಸರಕಾರದೊಂದಿಗೆ ಸಂಪೂರ್ಣ ಸಹಮತವನ್ನು ಹೊಂದಿದ್ದಾರೆ ಎಂದು ಹೇಳಿರುವ ಒಕ್ಕೂಟವು,ಆದರೆ ಇದಕ್ಕಾಗಿ ಸರಕಾರವು ತೈಲ ಮತ್ತು ಅನಿಲದ ಅನ್ವೇಷಣೆ ಹಾಗೂ ಉತ್ಪಾದನೆಗಾಗಿ ಖಾಸಗಿ ಕ್ಷೇತ್ರಕ್ಕೆ ಒದಗಿಸಿರುವ ಹಣಕಾಸು ಮತ್ತು ನಿಯಂತ್ರಕ ಸೌಲಭ್ಯಗಳನ್ನು ಒಎನ್ಜಿಸಿಗೂ ಒದಗಿಸಬೇಕು ಎಂದು ಆಗ್ರಹಿಸಿದೆ.
‘ಆದ್ದರಿಂದ ಉತ್ಪಾದನೆಯನ್ನು ಮಾಡುತ್ತಿರುವ ತೈಲ ಕ್ಷೇತ್ರಗಳನ್ನು ಹರಿವಾಣದಲ್ಲಿಟ್ಟು ಖಾಸಗಿ ಕಂಪನಿಗೆ ಒಪ್ಪಿಸುವುದು ಯಶಸ್ವಿಯಾಗುವುದಿಲ್ಲ ಮತ್ತು ನಮ್ಮ ಅಭಿಪ್ರಾಯದಲ್ಲಿ ಇದನ್ನು ಅನುಸರಿಸಬಾರದು ಎಂದು ನಿಮ್ಮನ್ನು ಕೋರುತ್ತಿದ್ದೇವೆ ’ಎಂದು ಒಕ್ಕೂಟವು ನ.11ರಂದು ಪುರಿಯವರಿಗೆ ಬರೆದಿರುವ ಪತ್ರದಲ್ಲಿ ಹೇಳಿದೆ.
ಸಣ್ಣ ಮತ್ತು ದೂರದ ತೈಲಕ್ಷೇತ್ರಗಳಿಂದ ಉತ್ಪಾದನೆಯನ್ನು ಕಾರ್ಯಸಾಧ್ಯಗೊಳಿಸಲು ಸರಕಾರಿ ನಿರ್ದೇಶಿತ ಮಾರುಕಟ್ಟೆ ಬೆಲೆಗಿಂತ ಕಡಿಮೆ ಅನಿಲ ಬೆಲೆಯನ್ನು ಪುನರ್ ಪರಿಶೀಲಿಸಬೇಕು ಹಾಗೂ ಹಾಲಿ ಬೆಲೆ ವ್ಯವಸ್ಥೆಯಲ್ಲಿ ಕಾರ್ಯಸಾಧ್ಯವಲ್ಲದ ನೈಸರ್ಗಿಕ ಅನಿಲದ ಸಣ್ಣ ನಿಕ್ಷೇಪಗಳನ್ನು ಮಾರಾಟ ಮಾಡಲು ಒಎನ್ಜಿಸಿಗೆ ಸ್ವಾತಂತ್ರ್ಯ ನೀಡಬೇಕು ಎಂದು ಹೇಳಿರುವ ಒಕ್ಕೂಟವು,ತೈಲ ನಿಕ್ಷೇಪಗಳನ್ನು ಗುರುತಿಸಲು ಸಮೀಕ್ಷೆಗಾಗಿ ಮತ್ತು ಬಾವಿಗಳನ್ನು ಕೊರೆಯಲು ಕೋಟ್ಯಂತರ ರೂ.ಗಳನ್ನು ಹೂಡಿಕೆ ಮಾಡುವ ಅಪಾಯವನ್ನು ಮೈಮೇಲೆಳೆದುಕೊಳ್ಳಲು ವಿದೇಶಿ ಮತ್ತು ಖಾಸಗಿ ಕಂಪನಿಗಳು ಬಯಸುವುದಿಲ್ಲ, ಬದಲಿಗೆ ಈಗಾಗಲೇ ಸ್ಥಾಪಿತ ತೈಲಕ್ಷೇತ್ರಗಳನ್ನು ಪಡೆದುಕೊಳ್ಳಲು ಅವು ಹವಣಿಸುತ್ತವೆ.
ಖಾಸಗಿ ಕಂಪನಿಗಳು ವಾಣಿಜ್ಯ ಅಂಶಗಳಿಗೆ ಮತ್ತು ಚಾಲ್ತಿಯಲ್ಲಿರುವ ಉದ್ಯಮ ವಾತಾವರಣಕ್ಕೆ ಆದ್ಯತೆಯನ್ನು ನೀಡುತ್ತವೆ, ಆದ್ದರಿಂದ ಒಎನ್ಜಿಸಿ ಸಿದ್ಧವಿರುವ ಅಪಾಯಗಳನ್ನು ಮೈಮೇಲೆಳೆದುಕೊಳ್ಳಲು ಅವು ಇಚ್ಛಿಸದಿರಬಹುದು ಎಂದು ಹೇಳಿರುವ ಅಧಿಕಾರಿಗಳ ಒಕ್ಕೂಟವು,ತೈಲ ಮತ್ತು ಅನಿಲ ಪರಿಶೋಧನೆಯು ಅತ್ಯಂತ ಅಪಾಯಕಾರಿ ಪ್ರಯತ್ನವಾಗಿದ್ದು, ಕೆಲವರು ಮಾತ್ರ ಅದರಲ್ಲಿ ಭಾಗಿಯಾಗಲು ಬಯಸುತ್ತಾರೆ. ಒಎಲ್ಎಪಿ (ಬಿಡ್ ಸುತ್ತುಗಳು) ಅಡಿ ಇತ್ತೀಚಿಗೆ ಆಹ್ವಾನಿಸಲಾಗಿದ್ದ ಬಿಡ್ಗಳಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇವಲ ಒಎನ್ಜಿಸಿ ಮತ್ತು ಸ್ವಲ್ಪ ಮಟ್ಟಿಗೆ ಆಯಿಲ್ ಇಂಡಿಯಾ ಲಿ.ಬಿಡ್ಗಳನ್ನು ಸಲ್ಲಿಸಿದ್ದು ಇದಕ್ಕೆ ನಿದರ್ಶನವಾಗಿದೆ ಎಂದು ಪತ್ರದಲ್ಲಿ ಬೆಟ್ಟು ಮಾಡಿದೆ.